ದಾವಣಗೆರೆ: ಹರಿಹರ ತಾಲೂಕಿನ ಚಿಕ್ಕಬಿದರೆ, ದುಗ್ಗತಿ ಸೇರಿದಂತೆ ಗ್ರಾಮಗಳಲ್ಲಿನ ಭೂ ಕಬಳಿಕೆ, ರೈತರ ಬಲವಂತ ಒಕ್ಕಲೆಬ್ಬಿಸುವಿಕೆ ವಿರುದ್ಧ ಧ್ವನಿ ಎತ್ತಿದ್ದೇನೆ. ಈ ಸಂಬಂಧ ದೂರು ನೀಡಿದರೂ ಕಾನೂನು ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅವ್ಯವಹಾರ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಹರಿಹರ ಶಾಸಕ ಬಿ. ಪಿ. ಹರೀಶ್ ಹೇಳಿದ್ದಾರೆ.
READ ALSO THIS STORY: ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮೀಣ ಪೊಲೀಸರಿಗೆ ದೂರು: ಬಿ. ಪಿ. ಹರೀಶ್
ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿಯೇ ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದೇನೆ. ಎರಡು ತಿಂಗಳೊಳಗೆ ವರದಿ ನೀಡುವಂತೆ ಆದೇಶಿಸಿದ್ದರೂ ಈವರೆಗೂ ಅಧಿಕಾರಿಗಳು ವರದಿ ಸಲ್ಲಿಸಿಲ್ಲ. ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಬೇಕಾದ ಸಿಎಸ್ ನಿರ್ಲಕ್ಷ್ಯ ತೋರಿದ್ದಾರೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ದೂರು ನೀಡಿದರೂ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಕಾರಣಕ್ಕೆ ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚಿಸಿ ರಾಜ್ಯಪಾಲರಿಗೂ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ರೈತರ ಕಬಳಿಕೆ ವಿರುದ್ಧ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇನೆ. ದಾಖಲೆಗಳನ್ನೂ ನೀಡಿದ್ದೇನೆ. ಆದರೂ ಸಂಬಂಧಪಟ್ಟ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇಂಥ ಕೆಟ್ಟ ವ್ಯವಸ್ಥೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ. ಜಿಲ್ಲಾಡಳಿತವೂ
ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯ ಕಾರ್ಯದರ್ಶಿಗಳವರೇ ನಾನು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದರೂ ದಾವಣಗೆರೆಯ ಅಧಿಕಾರಿಗಳು ಮೀನಾಮೇಷ ಎಣಿಸುತ್ತಾ ಕುಳಿತಿದ್ದಾರೆ. ಸುಮಾರು ಎಂಟು ತಿಂಗಳಾದರೂ ವರದಿ ಕೊಡದ ಅಧಿಕಾರಿಗಳನ್ನು ಮುಖ್ಯ ಕಾರ್ಯದರ್ಶಿಗಳು ಪ್ರಶ್ನಿಸಿಲ್ಲ. ಕಂದಾಯ ಇಲಾಖೆ, ಅರಣ್ಯ ಇಲಾಖೆಗೆ ಸೇರಿದ ಜಾಗ, ಹಳ್ಳಗಳನ್ನು ಮುಚ್ಚಿರುವ ಕುರಿತಂತೆ ಇದುವರೆಗೆ ಸಮರ್ಪಕವಾದ ಉತ್ತರವೂ ಬಂದಿಲ್ಲ, ಕ್ರಮವೂ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಶ್ರೀನಿವಾಸ್ ದಾಸಕರಿಯಪ್ಪ, ಮಾಜಿ ಶಾಸಕರಾದ ಎಸ್. ವಿ. ರಾಮಚಂದ್ರಪ್ಪ, ಹೆಚ್. ಪಿ. ರಾಜೇಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ
ಶಿವಕುಮಾರ್, ಬಿ. ಟಿ. ಸಿದ್ಧಪ್ಪ, ಪಿ. ರಾಜೇಶ್ ನಾಯ್ಕ ಮತ್ತಿತರರು ಹಾಜರಿದ್ದರು.





Leave a comment