Home ದಾವಣಗೆರೆ ಬಿಜೆಪಿ ಗೆಲ್ಲಲ್ಲವೆಂದ ಮೇಲೆ ಮುಂದಿನ ವಿಧಾನಸಭೆ ಚುನಾವಣೆಗೆ ಹೇಗೆ ದಿಕ್ಸೂಚಿ ಆಗುತ್ತೆ: ಸಿಎಂ ಸಿದ್ದರಾಮಯ್ಯ ಪ್ರಶ್ನೆ
ದಾವಣಗೆರೆಬೆಂಗಳೂರು

ಬಿಜೆಪಿ ಗೆಲ್ಲಲ್ಲವೆಂದ ಮೇಲೆ ಮುಂದಿನ ವಿಧಾನಸಭೆ ಚುನಾವಣೆಗೆ ಹೇಗೆ ದಿಕ್ಸೂಚಿ ಆಗುತ್ತೆ: ಸಿಎಂ ಸಿದ್ದರಾಮಯ್ಯ ಪ್ರಶ್ನೆ

Share
ಸಿದ್ದರಾಮಯ್ಯ
Share

ದಾವಣಗೆರೆ: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲೋದಿಲ್ಲ ಎಂದ ಮೇಲೆ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಹೇಗೆ ಆಗುತ್ತದೆ. ನಾವೇ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ಈ ಹಿಂದೆ ನಡೆದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದರು. ಈ ಬಾರಿಯೂ ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರ ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್, ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಸಂಡೂರು ಉಪಚುನಾವಣೆಯಲ್ಲಿ ತುಕರಾಂ ಪತ್ನಿ ಅನ್ನಪೂರ್ಣ ಅವರು ಗೆಲುವು ಸಾಧಿಸಿದ್ದರು. ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಸಮರ್ಥ್ ಶಾಮನೂರು, ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲ್ಲುವುದು ಖಚಿತ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷವು ಯಾವಾಗಲೂ ನುಡಿದಂತೆ ನಡೆಯುತ್ತದೆ. ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದವರನ್ನೂ ತಲುಪಿದ್ದೇವೆ. ಜಾತಿ ಜಾತಿಗಳ ನಡುವೆ, ಧರ್ಮ ಧರ್ಮದ ನಡುವೆ ವಿಷ ಬೀಜ ಬಿತ್ತಿ ರಾಜಕಾರಣ ಮಾಡುವುದಿಲ್ಲ. ಎಲ್ಲಾ ವರ್ಗದವರನ್ನೂ ಸರಿದೂಗಿಸಿಕೊಂಡು ಹೋಗುವ ಪಕ್ಷ ನಮ್ಮದು. ಅಭಿವೃದ್ಧಿ ಕಾರ್ಯಗಳು, ಶಾಮನೂರು ಶಿವಶಂಕರಪ್ಪರ ಸಮಾಜ ಸೇವೆ, ಅಭಿವೃದ್ಧಿ ಚಿಂತನೆ ಸೇರಿದಂತೆ ಅವರ ಕಾರ್ಯಗಳು ಮೊಮ್ಮಗನಿಗೆ ಶ್ರೀರಕ್ಷೆಯಾಗಿವೆ
ಎಂದು ಹೇಳಿದರು.

ಶಾಸಕರು ನಿಧನರಾದರೆ ಕುಟುಂಬದವರಿಗೆ ನೀಡುವ ಸಂಪ್ರದಾಯ ಮೊದಲಿನಿಂದಲೂ ಇದೆ. ಇದೇನು ಕುಟುಂಬ ರಾಜಕಾರಣ ಅಲ್ಲ. ಶಾಮನೂರು ಶಿವಶಂಕರಪ್ಪರ ಮೊಮ್ಮಗ ಸಮರ್ಥ್ ಶಾಮನೂರುಗೆ ನೀಡಿದ್ದು, ಗೆದ್ದೇ ಗೆಲ್ಲುತ್ತಾರೆ. ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಅನ್ಯಾಯ ಮಾಡಿಲ್ಲ. ಶಿಗ್ಗಾಂವ್ ನಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿದ್ದೆವು. ಗೆಲ್ಲುವ ಅಭ್ಯರ್ಥಿಯನ್ನು ಈ ಬಾರಿ ಕಣಕ್ಕಿಳಿಸಿದ್ದೇವೆ. ಏನೇ ಅಸಮಾಧಾನ ಇದ್ದರೂ ಕರೆದು ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಪಟ್ಟು ಹಿಡಿದಿದ್ದ ಜಮೀರ್ ಅಹ್ಮದ್ ಅವರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿರದಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅವರು, ಜಮೀರ್ ಅಹ್ಮದ್ ಅವರು ಬಂದೇ ಬರುತ್ತಾರೆ. ದಾವಣಗೆರೆಯಲ್ಲಿ ಪ್ರಚಾರ ನಡೆಸುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಏ.1 ಮತ್ತು 2 ಕ್ಕೆ ದಾವಣಗೆರೆಗೆ ಬರ್ತೀನಿ

ಏಪ್ರಿಲ್ 1 ಮತ್ತು 2 ರಂದು ದಾವಣಗೆರೆಗೆ ಮತ್ತೆ ಬರುತ್ತೇನೆ. ಎರಡು ದಿನಗಳ ಕಾಲ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಪ್ರಚಾರ ನಡೆಸುತ್ತೇನೆ. ಎಲ್ಲಾ ವರ್ಗದ ಮುಖಂಡರು, ನಾಯಕರು, ಕಾರ್ಯಕರ್ತರು, ಮತದಾರರಲ್ಲಿ ಮತಯಾಚನೆ ಮಾಡುತ್ತೇನೆ. ಅಲ್ಪಸಂಖ್ಯಾತ ಮುಖಂಡರು ಈ ಬಾರಿಯೂ ಕಾಂಗ್ರೆಸ್ ಬೆಂಬಲಿಸಲಿದ್ದಾರೆ. ಸಾದಿಕ್ ಪೈಲ್ವಾನ್ ಕೂಡ ಕಾಂಗ್ರೆಸ್ ಕಾರ್ಯಕರ್ತ. ಅಯೂಬ್ ಪೈಲ್ವಾನ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ನಾಮಪತ್ರ ಸಲ್ಲಿಕೆ ರ್ಯಾಲಿ ವೇಳೆ ನಮ್ಮ ಜೊತೆ ಇದ್ದಾರೆ. ಅಲ್ಪಸಂಖ್ಯಾತರು ಕಾಂಗ್ರೆಸ್ ನಿಂದ ದೂರವಾಗಿಲ್ಲ. ಈ ರೀತಿಯ ವದಂತಿ ಸರಿಯಲ್ಲ. ಎಲ್ಲವೂ ಸರಿ ಇದೆ ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *