Site icon Kannada News-suddikshana

ದೆಹಲಿ ಪ್ರತಿನಿಧಿಸುತ್ತಿರುವ ಕರ್ನಾಟಕದ ಸಂಸದರು, ರಾಜ್ಯಸಭಾ ಸದಸ್ಯರು, ಮಾಜಿ ಸಿಎಂ ಸೇರಿ ಎಲ್ಲರಿಗೂ ಪತ್ರ ಬರೆದ ಸಿದ್ದರಾಮಯ್ಯ: ಏನಿದೆ ಗೊತ್ತಾ…?

SUDDIKSHANA KANNADA NEWS/ DAVANAGERE/ DATE:06-02-2024

ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರದ ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ ದೇವೇಗೌಡರು, ಕರ್ನಾಟಕದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವ ಪ್ರಲ್ಹಾದ್ ಜೋಷಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದ ಸದಾನಂದ ಗೌಡ ಅವರು ಸೇರಿದಂತೆ ದೆಹಲಿಯಲ್ಲಿ ನಾಡನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಗೌರವಾನ್ವಿತರಿಗೆ ಫೆಬ್ರವರಿ 7ರಂದು ನಡೆಯಲಿರುವ ಚಲೋ ದಿಲ್ಲಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿ ಪತ್ರ ಬರೆದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದು ಯಾವುದೇ ಪಕ್ಷದ ವಿರುದ್ಧದ ಹೋರಾಟವಲ್ಲ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ನಾಡಿಗೆ ಆಗುತ್ತಿರುವ ಅನ್ಯಾಯ, ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ವಿರುದ್ಧದ ಹೋರಾಟ. ಕರ್ನಾಟಕದ ಭವಿಷ್ಯಕ್ಕಾಗಿ, ಕನ್ನಡಿಗರ ನೆಮ್ಮದಿಯ ಬದುಕಿಗಾಗಿ ನಾಳೆ ಬೆಳಿಗ್ಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ದೆಹಲಿ ಸರ್ಕಾರಕ್ಕೆ ತಲುಪಿಸಿ, ನ್ಯಾಯ ಕೇಳುವುದು ನಮ್ಮೆಲ್ಲರ ಕರ್ತವ್ಯ. ತಾವೆಲ್ಲರೂ ಪಕ್ಷಬೇಧ ಮರೆತು ಕರ್ನಾಟಕದ ಹಿತಕ್ಕಾಗಿ ನಮ್ಮ ಧ್ವನಿಗೆ ಧ್ವನಿಗೂಡಿಸುತ್ತೀರ ಎಂದು
ನಂಬಿದ್ದೇನೆ ಎಂದಿದ್ದಾರೆ.

ಕೇಂದ್ರ ಸರ್ಕಾರದಿಂದ ಕರ್ನಾಟಕದ ಮೇಲೆ ನಡೆಯುತ್ತಿರುವ ಆರ್ಥಿಕ ದೌರ್ಜನ್ಯದ ವಿರುದ್ಧ ಧ್ವನಿಯೆತ್ತೋಣ. ನಾಳೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುವ ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ‌ ಹಕ್ಕಿಗಾಗಿ ಪ್ರತಿಭಟಿಸೋಣ ಎಂದು ಮನವಿ ಮಾಡಿದ್ದಾರೆ.

Exit mobile version