Site icon Kannada News-suddikshana

ಪರಿಸರ ಸಂರಕ್ಷಣೆಗೆ ಶಾಲೆ, ಮನೆಗಳ ಸುತ್ತಮುತ್ತ ಮಕ್ಕಳು ಗಿಡ ಬೆಳೆಸಬೇಕು: ಬಿ. ಟಿ. ಪುಟ್ಟಪ್ಪ ಸಲಹೆ

SUDDIKSHANA KANNADA NEWS/ DAVANAGERE/ DATE-05-06-2025

ಭೀಮನಸಮುದ್ರ: ಇತ್ತೀಚಿನ ದಿನಗಳಲ್ಲಿ ಪರಿಸರ ಹಾಳಾಗಲು ವಾಯುಮಾಲಿನ್ಯ ಮತ್ತು ಹೆಚ್ಚಿನ ಪ್ಲಾಸ್ಟಿಕ್ ಬಳಕೆಯೇ ಕಾರಣ. ಆದ್ದರಿಂದ ಮಕ್ಕಳಿಗೆ ಈಗಿನಿಂದಲೇ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಅವರೂ ಜಾಗೃತರಾಗುವಂತೆ ಮಾಡಬೇಕು. ಶಾಲೆ ಮತ್ತು ಮನೆಗಳ ಸುತ್ತಮುತ್ತ ಗಿಡಮರಗಳನ್ನು ಬೆಳೆಸಿದರೆ ಒಳ್ಳೆಯ ಗಾಳಿ ಸಿಗುತ್ತದೆ ಎಂದು ಭೀಮಸಮುದ್ರ ಶ್ರೀ ಭೀಮೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಅಧ್ಯಕ್ಷ ಬಿ. ಟಿ. ಪುಟ್ಟಪ್ಪ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ಶ್ರೀ ಭೀಮೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಗಿಡ ನೆಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಲಹಾ ಸಮಿತಿ ಸದಸ್ಯ ಬಿ. ಕೆ. ಕಲ್ಲಪ್ಪ ಮಾತನಾಡಿ ಮನುಷ್ಯರು ಆರೋಗ್ಯವಾಗಿ ಇರಬೇಕು ಎಂದರೆ ಆಹಾರ, ಶುದ್ಧ ಗಾಳಿ, ನೀರು ಬೇಕು. ಆದರೆ ಇದನ್ನು ಕಾಪಾಡಲು ಗಿಡಮರಗಳ ಅವಶ್ಯಕತೆ ಇದೆ. ಆದ್ದರಿಂದ ಮಕ್ಕಳು ಪರಿಸರ ಕಾಪಾಡಿಕೊಳ್ಳಲು ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಶಾಲೆಯ ಮುಖ್ಯ ಉಪಾಧ್ಯಾಯರಾದ ಎಲ್. ಕೆ. ಸುಮಾ ಮಾತನಾಡಿ ಎಲ್ಲರಿಗೂ ಪರಿಸರ ದಿನಾಚರಣೆಯ ಶುಭಾಶಯಗಳು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಪ್ರದೀಪ್ ಅವರು ಕಾರ್ಯಕ್ರಮದಲ್ಲಿ ಎಲ್ಲರನ್ನೂ ಸ್ವಾಗತಿಸಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಕೋಮಲ, ರೇಖಾ, ಶಾಲಾ ಮಕ್ಕಳು, ಪೋಷಕರು ಉಪಸ್ಥಿತರಿದ್ದರು.

Exit mobile version