Site icon Kannada News-suddikshana

BIG BREAKING NEWS: ಚನ್ನಗಿರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರ: ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ಯಾಕೆ….?

SUDDIKSHANA KANNADA NEWS\ DAVANAGERE\ DATE:21-10-2023

ದಾವಣಗೆರೆ: ಇಡೀ ಜಗತ್ತಿಗೆ ರಾಮ ಲಕ್ಷ್ಮಣರನ್ನು ಪರಿಚಯಿಸಿದ ಆದಿಕವಿ ಮಹರ್ಷಿ ವಾಲ್ಮಿಕಿ ಪ್ರತಿಮೆಯನ್ನು ಚನ್ನಗಿರಿಯಲ್ಲಿ ತೆರವುಗೊಳಿಸಿದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಚನ್ನಗಿರಿ ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ರಾತ್ರಿಯಾದರೂ ಸಾವಿರಾರು ಯುವಕರು, ಸಮಾಜದ ಮುಖಂಡರು ಪುರಸಭೆ ಎದುರು ಪ್ರತಿಭಟನೆ ನಡೆಸಿ‌ ಮುತ್ತಿಗೆ ಹಾಕಿ ಸಿಟ್ಟು ಹೊರಹಾಕಿದರು.

ಎರಡು ದಶಕಗಳಿಂದ ಈ ಸರ್ಕಲ್ ನಲ್ಲಿ ವಾಲ್ಮಿಕಿ ಸರ್ಕಲ್ ಎಂದು ಬೋರ್ಡ್ ಇತ್ತು. ಅಧಿಕಾರಿಗಳು ಏಕಾಏಕಿ ವಾಲ್ಮೀಕಿ ಪ್ರತಿಮೆಯನ್ನು ತೆರವುಗೊಳಿಸಿದ್ದರು. ಅ.21ರವರೆಗೆ ವಾಲ್ಮೀಕಿ‌ ಸಮಾಜ ಗಡುವು ಕೊಟ್ಟಿತ್ತು. ಬೇಡಿಕೆ‌ ಈಡೇರದ ಕಾರಣ ಪ್ರತಿಭಟನೆ ಜೋರಾಗಿದೆ.

ವಾಲ್ಮೀಕಿ ಸಮಾಜದ ಮುಖಂಡ ಹೊದಿಗೆರೆ ರಮೇಶ್ ಅವರ ನೇತೃತ್ವದಲ್ಲಿ ಚನ್ನಗಿರಿ ಪುರಸಭೆಗೆ ಮುತ್ತಿಗೆ ಹಾಕಿ ಸಮಾಜದ ಬಾಂಧವರು ಆಕ್ರೋಶ ಹೊರ ಹಾಕಿದರು.

ರಾಜ್ಯ ಸರ್ಕಾರವು ಚನ್ನಗಿರಿಯ ವಾಲ್ಮೀಕಿ ವೃತ್ತದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಅ.21ರೊಳಗೆ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ನಾಯಕರ ಒಕ್ಕೂಟವೂ ಎಚ್ಚರಿಸಿತ್ತು.

ಚನ್ನಗಿರಿಯ ಎನ್.ಎಚ್.13 ರಲ್ಲಿ ಇರುವ ವೃತ್ತದಲ್ಲಿ ವಾಲ್ಮೀಕಿ ನಾಯಕ ಸಮಾಜ ಹಾಗೂ ಸ್ವಾಭಿಮಾನಿ ನಾಯಕರ ಯುವ ವೇದಿಕೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸಮಾಜದ ಶ್ರೀಗಳು, ನಾಯಕರು ಬೆಂಬಲ ವ್ಯಕ್ತಪಡಿಸಿದ್ದರು. ಆದ್ರೆ ಬೇಡಿಕೆ‌ ಈಡೇರದ ಕಾರಣ ಹೋರಾಟದ ತೀವ್ರತೆ ಹೆಚ್ಚಾಗಿದೆ.

ವಾಲ್ಮೀಕಿ ಕೇವಲ ಒಂದು ಸಮುದಾಯದವರಲ್ಲ. ಇಡೀ ನಾಡಿಗೆ ರಾಮಾಯಣ ಮಹಾಗ್ರಂಥವನ್ನು ನೀಡಿದವರು. ಆ ಗ್ರಂಥವನ್ನು ಎಲ್ಲ ಸಮುದಾಯಗಳು ಪೂಜಿಸುತ್ತವೆ, ಆರಾಧಿಸುತ್ತವೆ. ಆದರೆ ವಾಲ್ಮೀಕಿ ಪ್ರತಿಮೆಯನ್ನು ಮಾತ್ರೋರಾತ್ರಿ ಎತ್ತಂಗಡಿ ಮಾಡಿದ್ದಾರೆ. ಇದು ಸರಿಯಲ್ಲ. ಅ.21 ರೊಳಗೆ ವಾಲ್ಮೀಕಿ ಪ್ರತಿಮೆಯನ್ನು ಇದೇ ಜಾಗದಲ್ಲಿ ತಂದು ಇಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ನೇರ ಎಚ್ಚರಿಕೆ ನೀಡಲಾಗಿತ್ತು.

ರಾಮನನ್ನು ಸೃಷ್ಟಿ ಮಾಡಿದ್ದು ವಾಲ್ಮೀಕಿ. ಆದರೆ ವಾಲ್ಮೀಕಿಯನ್ನು ಇವತ್ತು ಎತ್ತಂಗಡಿ ಮಾಡಿದ್ದ ಬಗ್ಗೆ ಎಲ್ಲ ಸಮುದಾಯಗಳೂ ಧ್ವನಿ ಎತ್ತಬೇಕು. ನಾವು ವಾಲ್ಮೀಕಿ ಕುಲದಲ್ಲಿ ಹುಟ್ಟಿದವರು ನಮ್ಮ ಧ್ವನಿ ಇನ್ನೂ ಗಟ್ಟಿಯಾಗಬೇಕು. ಇಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಮರು ಸ್ಥಾಪನೆ ಮಾಡಬೇಕು. ಇಲ್ಲದಿದ್ದರೆ ಚನ್ನಗಿರಿಯಿಂದಲೇ ವಿಧಾನ ಸೌಧ ಚಲೋ ಶುರುವಾಗುತ್ತೆ. ಅಧಿಕಾರಿಗಳ ಲಾಲಸೆ, ಜನಪ್ರತಿನಿಧಿಗಳ ಬೇಜವಾಬ್ದಾರಿತನ ಈ ಕಿಡಿಗೇಡಿತನಕ್ಕೆ ಕಾರಣವಾಗಿದೆ. ಒಬ್ಬ ದಾರ್ಶನಿಕನ ಪ್ರತಿಮೆಯನ್ನು ನಿರ್ಮಾಣಕ್ಕೆ 2017 ರಂದಲೂ ಮನವಿ ನೀಡುತ್ತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ನಾಯಕ ಸಮುದಾಯದ ಯುವಕರು ಆದಿಕವಿ‌ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ. ವಿಶ್ವಕವಿ ವಾಲ್ಮೀಕಿಗೆ ಗೌರವ ನೀಡಿದ್ದಾರೆ. ಇದು ಅಧಿಕಾರಿಗಳು, ಜ‌ನಪ್ರತಿನಿಧಿಗಳು ಮಾಡಬೇಕಾಗಿದ್ದ ಕೆಲಸ. ಆದರೆ ಅದನ್ನು ಸಮುದಾಯದ ಯುವಕರು ಮಾಡಿದ್ದಾರೆ. ಅದನ್ನು ನಾವು ಗೌರವಿಸಬೇಕಿತ್ತು. ಆದರೆ ಅದನ್ನು ಉಡಾಫೆಯಿಂದ ತೆರವುಗೊಳಿಸಿದ್ದಾರೆ. ಅ.21ರ ನಂತರ ಹೀಗೇ ಮುಂದುವರಿದರೆ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ರಮೇಶ್ ಹಿರೇಜಂಬೂರು ಎಚ್ಚರಿಕೆ‌ ನೀಡಿದ್ದರು.

ಕಾಂಗ್ರೆಸ್ ಮುಖಂಡರು, ನಾಯಕ ಸಮಾದ ಮುಖಂಡರಾದ ಹೊದಿಗೆರೆ ರಮೇಶ್ ಮಾತನಾಡಿ,
ರಾಜಕಾರಣ ಬೇರೆ ಸಮುದಾಯದ ಹಿತ ಬೇರೆ. ನಾವು ಕಾನೂನು ಕೃಗೆತ್ತಿಕೊಳ್ಳುವುದು ಬೇಡ ಎಂದು ಸುಮ್ಮನಿದ್ದೇವೆ. ನಮ್ಮ ಒಗ್ಗಟ್ಟಿನ ಬಗ್ಗೆ ಅನುಮಾನ ಬೇಡ. ಸಮುದಾಯ ಇಲ್ಲಿ ಅಷ್ಟು ಒಗ್ಗಟ್ಟಿದೆ. ಬೇರೆ ಸಮುದಾಯಗಳು ಕೂಡ ಈ ಹೋರಾಟಕ್ಕೆ ಬೆಂಬಲ ನೀಡುತ್ತಿವೆ. ನಾವು ಕೇಳಿರುವುದರಲ್ಲಿ ತಪ್ಪೇನಿದೆ. ವಾಲ್ಮೀಕಿ ಅವರ ಪ್ರತಿಮೆ ಪ್ರತಿಷ್ಠಾಪನೆ ಆಗುವವರೆಗೆ ಹೋರಾಟ ನಿಲ್ಲಿಸಲ್ಲ ಎಂದು ಎಚ್ಚರಿಕೆ‌ ನೀಡಿದರು.

ಇದು ಶಾಂತಿಯುತ ಹೋರಾಟ. ವಾಲ್ಮೀಕಿ ಪ್ರತಿಮೆಯನ್ನು ವಾಪಸ್ ತಂದು ಕೂರಿಸದೆ ಹೋದ್ರೆ ಹಳ್ಳಿ ಹಳ್ಳಿಯಿಂದ ನಮ್ಮ ಸಮುದಾಯದ ಜನ ಹರಿದು ಬರ್ತಾರೆ. ತೀವ್ರ ಹೋರಾಟ ಕೈಗೆತ್ತಿಕೊಳ್ಳುವ ಮುನ್ನ ತಾಲೂಕು ಆಡಳಿತ ವಾಲ್ಮೀಕಿಯನ್ನು ವಾಪಸ್ ತಂದು ಕೂರಿಸಬೇಕು.‌ ಸಿಪಾಯಿ ದಂಗೆ ರೀತಿ ಹೋರಾಟ ನಡೆಯುತ್ತೆ.‌ ಆ ರೀತಿಯ ಹೋರಾಟವೇ ಈಗ ಅಗತ್ಯ ಇದೆ ಎಂದು ಹೇಳಿದರು.

Exit mobile version