ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಜನಸೇವೆ ಮಾಡಬೇಕೆಂಬ ಕನಸು ಕಂಡಿದ್ದ ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಶಾಮನೂರು ಆಂಜನೇಯ ಸ್ವಾಮಿ ದೇವಸ್ಥಾನದ ಟ್ರಸ್ಟಿಗಳಾಗಿದ್ದ ಚಂದ್ರಶೇಖರ್ ಸಂಕೊಳ್ ಅವರ ದಾರುಣ ಸಾವು ಬರಸಿಡಿಲು ಬಡಿದಂತಾಗಿದೆ. ಮಾತ್ರವಲ್ಲ, ಸಾಲದ ಸುಳಿಗೆ ಸಿಲುಕಿ ಒದ್ದಾಡಿದ್ದ ಬಿಜೆಪಿ ನಾಯಕ ಆತ್ಮಹತ್ಯೆಗೆ ಶರಣಾಗಿರುವ ರೀತಿ ಎಲ್ಲರಲ್ಲಿಯೂ ಆಶ್ಚರ್ಯ ತಂದಿದೆ.
READ ALSO THIS STORY: BIG BREAKING: ಕಾರಿಗೆ ಬೆಂಕಿ ಹಚ್ಚಿಕೊಂಡು ದಾವಣಗೆರೆ ಮಾಜಿ ಕಾರ್ಪೊರೇಟರ್ ಚಂದ್ರಶೇಖರ್ ಸಂಕೊಳ್ ಆತ್ಮಹತ್ಯೆ: ತಂದೆ ಸಾವಿನ ಸುದ್ದಿ ಕೇಳಿ ಪುತ್ರಿ, ಪುತ್ರನೂ ಸೂಸೈಡ್ ಗೆ ಯತ್ನ!
ಶಾಮನೂರು ಗ್ರಾಮದವರಾದ ಚಂದ್ರಶೇಖರ್ ಸಂಕೊಳ್ ಸರಳ ಜೀವಿ. ಮಾತು ಕಡಿಮೆ ಕೆಲಸ ಜಾಸ್ತಿ ಎಂಬ ವ್ಯಕ್ತಿತ್ವ. ಪಕ್ಷಕ್ಕಾಗಿ ಹಗಲಿರುಳು ದುಡಿದ ನಾಯಕ. 2018ರ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಆದರೆ ಟಿಕೆಟ್ ಕೈ ತಪ್ಪಿತು. ಎಸ್. ಎ. ರವೀಂದ್ರನಾಥ್ ಅವರಿಗೆ ಬಿಜೆಪಿ ಬಿ ಫಾರಂ ನೀಡಿತ್ತು. ಈ ಚುನಾವಣೆಯಲ್ಲಿ ಎಸ್. ಎ. ರವೀಂದ್ರನಾಥ್ ಅವರು ಜಯಶಾಲಿ ಆಗಿ ಶಾಸಕರೂ ಆಗಿದ್ದರು.
ಪರಿವರ್ತನಾ ಯಾತ್ರೆಯಲ್ಲಿ ಸಕ್ರಿಯ:
2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಬಿಜೆಪಿ ಸಾರಥ್ಯ ವಹಿಸಿಕೊಂಡು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯದ ಮೂಲೆ ಮೂಲೆ ಸುತ್ತಿದ್ದರು. ಪಕ್ಷ ಮತ್ತೆ ಸಂಘಟಿಸಲು ಶ್ರಮಿಸಿದ್ದರು. 2017ರಲ್ಲಿ ಯಡಿಯೂರಪ್ಪರ ಈ ಯಾತ್ರೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಆಗ ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಶೇಖರ್ ಸಂಕೊಳ್ ಅವರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜನಸೇವೆ ಮಾಡಬೇಕೆಂಬ ಕನಸು ಕಂಡಿದ್ದರು. ಆದರೆ, ಆ ಆಸೆ ಈಡೇರಲಿಲ್ಲ.
16 ಎಕರೆ ಮಾರಿದ್ದ ಚಂದ್ರಶೇಖರ್:
ಇನ್ನು ಚಂದ್ರಶೇಖರ್ ಸಂಕೊಳ್ ಅವರು ಈ ಚುನಾವಣೆಯಲ್ಲಿ ಟಿಕೆಟ್ ಸಿಗಬಹುದು ಎಂಬ ಕಾರಣದಿಂದ ಸುಮಾರು ಹದಿನಾರು ಎಕರೆ ತನ್ನ ಹೆಸರಿನಲ್ಲಿದ್ದದ್ದನ್ನು ಮಾರಾಟ ಮಾಡಿದ್ದರು ಎಂದು ತಿಳಿದು ಬಂದಿದೆ. ಕಬ್ಬಿಣ ಮತ್ತು ಸಿಮೆಂಟ್ ಅಂಗಡಿಗಾಗಿಯೂ ಸಾಲ ಮಾಡಿದ್ದರು. ಬರಬರುತ್ತಾ ಸಾಲವೂ ಹಾಗೂ ಬಡ್ಡಿಯೂ ಜಾಸ್ತಿಯಾಗುತ್ತಾ ಹೋಯಿತು. ದಿನಕಳೆದಂತೆ ಒತ್ತಡವೂ ಹೆಚ್ಚಾಯಿತು. ರಾಜಕಾರಣಕ್ಕೋಸ್ಕರ ಹದಿನಾರು ಎಕರೆ ಮಾರಾಟ ಮಾಡಿದ್ದರಿಂದ ಮನೆಯಲ್ಲಿ
ಸಹಜವಾಗಿಯೇ ಆಗಾಗ್ಗೆ ಗಲಾಟೆ ಆಗುತಿತ್ತು ಎನ್ನಲಾಗುತ್ತಿದೆ.
ಸಾವಿಗೆ ಶರಣಾಗಿದ್ದು ಹೇಗೆ?
ಚಂದ್ರಶೇಖರ್ ಸಂಕೊಳ್ ಅವರು ಬಿಜೆಪಿಯ ಬಹುತೇಕ ಚುನಾವಣೆಗಳಲ್ಲಿ ಸಕ್ರಿಯವಾಗಿ ಓಡಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಲ ತೀರಿಸಲಾಗದೇ ಕಂಗೆಟ್ಟಿದ್ದರು. ಆರ್ಥಿಕ ಪರಿಸ್ಥಿತಿ ಜಟಿಲವಾಗುತ್ತಾ ಹೋಯಿತು. ಸಾಲ ತೀರಿಸುವುದು ಹೇಗೆ? ಮಕ್ಕಳ ಭವಿಷ್ಯ ರೂಪಿಸುವುದೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದರು. ಮಾನಸಿಕವಾಗಿ ಝರ್ಜಿತರಾಗಿದ್ದರು. ಅಷ್ಟೇ ಅಲ್ಲದೇ ಪುತ್ರ ಹಾಗೂ ಪುತ್ರಿ ಅಪ್ಪನ ಸಾಲದ ವಿಚಾರವಾಗಿ ಪ್ರಶ್ನೆ ಮಾಡಿದ್ದರು ಎಂದು ತಿಳಿದು ಬಂದಿದ್ದು, ಇದು ಮನಸ್ಸಿಗೆ ಆಘಾತ ತಂದಿತ್ತು ಎಂದು ಮೂಲಗಳು ತಿಳಿಸಿವೆ.
ಚಂದ್ರಶೇಖರ್ ಸಂಕೊಳ್ ಅವರು ಶನಿವಾರ ಮನೆಯಿಂದ ಹೊರ ಹೋಗಿದ್ದಾರೆ. ದಾವಣಗೆರೆ ತಾಲೂಕಿನ ನಾಗನೂರು ಬಳಿಯ ಬಿಸ್ಲೇರಿ ಬಳಿಯ ಜಮೀನಿನಲ್ಲಿ ಕಾರು ನಿಲ್ಲಿಸಿದ್ದರು. ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತಿದ್ದಾರೆ. ಆ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಾರಿನೊಳಗೆ ಕುಳಿತು ಸಜೀವ ದಹನವಾಗಿದ್ದಾರೆ.
ಪುತ್ರ, ಪುತ್ರಿಗೆ ಆಘಾತ: ಸಾವಿಗೆ ಯತ್ನ:
ಚಂದ್ರಶೇಖರ್ ಸಂಕೊಳ್ ಪುತ್ರ 20 ವರ್ಷದ ನರೇಶ್ ಸಂಕೊಳ್ ಹಾಗೂ 23 ವರ್ಷದ ಪವಿತ್ರಾ ಅವರಿಗೆ ತಂದೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ದಿಗ್ಬ್ರಾಂತರಾಗಿದ್ದಾರೆ. ಪುತ್ರಿ ಪವಿತ್ರಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದರೆ, ಪುತ್ರ ನರೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಅಕ್ಕಪಕ್ಕದವರು ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಮನೆಯಲ್ಲಿ ನಡೆದಿತ್ತಾ ಜಗಳ?
ತಂದೆ ಸಾಲ ವಿಚಾರ ಮಕ್ಕಳಲ್ಲಿಯೂ ಅತೃಪ್ತಿ ತಂದಿತ್ತು. ಮನೆಯಲ್ಲಿ ಅಪ್ಪನ ಜೊತೆ ವಾಗ್ವಾದವನ್ನೂ ಮಕ್ಕಳು ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಇದರಿಂದ ಮನನೊಂದು ಚಂದ್ರಶೇಖರ್ ಸಂಕೊಳ್ ಮನೆಯಿಂದ ಹೊರ ಹೋಗಿದ್ದರು.
2017ರಲ್ಲಿ ಆಗಿದ್ದರು ಕಾರ್ಪೊರೇಟರ್:
ದಾವಣಗೆರೆ ಮಹಾನಗರ ಪಾಲಿಕೆಯ ಆಗಿನ 40ನೇ ವಾರ್ಡ್ ನಿಂದ ಶಾಮನೂರಿನಿಂದ ಸ್ಪರ್ಧಿಸಿ ಜಯಶಾಲಿಯಾಗಿದ್ದರು. ಜನರ ಪ್ರೀತಿ ಸಂಪಾದನೆ ಮಾಡಿದ್ದರಿಂದಲೇ ಕಾರ್ಪೊರೇಟರ್ ಆಗಿದ್ದರು. ಮಾತ್ರವಲ್ಲ, ಬರಗಾಲದಂಥ ಸಂದರ್ಭದಲ್ಲಿ
ಜನರಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕುಡಿಯುವ ನೀರು ಒದಗಿಸಿ ಭಗೀರಥ ಎನಿಸಿಕೊಂಡಿದ್ದರು. ಬಿಜೆಪಿ ಉಪಾಧ್ಯಕ್ಷರಾಗಿದ್ದ ಚಂದ್ರಶೇಖರ್ ಸಂಕೋಳ್ ಅವರು ಶಾಮನೂರು ಬಳಿ ಇರುವ ಸಂಕೋಳ್ ಶಿವಪ್ಪ ಬಡಾವಣೆಯಲ್ಲಿ ಟ್ಯಾಂಕರ್ ಗಳ ಮೂಲಕ ಉಚಿತ ನೀರು ಪೂರೈಸಿ ಜನರಿಗೆ ನೆರವಾಗಿದ್ದರು.
ಇಷ್ಟೆಲ್ಲಾ ಜನಪರ, ಉತ್ತಮ ವ್ಯಕ್ತಿತ್ವ ಹೊಂದಿದ್ದ ಚಂದ್ರಶೇಖರ್ ಸಂಕೊಳ್ ಅವರ ಸಾವು ನಿಜಕ್ಕೂ ದುರಂತವೇ ಸರಿ. ಇನ್ನು ಬದುಕಿ ಬಾಳಕಿದ್ದ ಮಕ್ಕಳೂ ಸಹ ಸಾವಿನ ದಾರಿ ಹಿಡಿಯಲು ಹೋಗಿದ್ದು ವಿಪರ್ಯಾಸವೇ ಸರಿ. ಜನಸೇವೆ ಮಾಡಬೇಕೆಂಬ ಕನಸು ಹೊತ್ತು ಸಾಲದ ಸುಳಿಗೆ ಸಿಲುಕಿ ಜನಪರ ನಾಯಕನ ದುರಂತ ಸಾವು ಎಲ್ಲರ ಕಣ್ಮಲ್ಲಿ ನೀರು ತರಿಸಿದೆಯಷ್ಟೇ ಅಲ್ಲದೇ, ಇಂಥ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂಬುದು ಎಲ್ಲರ ನೋವಿನ ನುಡಿಯಾಗಿದೆ.





Leave a comment