Site icon Kannada News-suddikshana

ಸಿಇಐಆರ್ ಪೋರ್ಟಲ್ ನಿಂದ 130 ಮೊಬೈಲ್ ಗಳ ವಶ: ವಶಪಡಿಸಿಕೊಂಡಿದ್ದು ಎಷ್ಟು ಮೌಲ್ಯದ್ದು ಗೊತ್ತಾ….?

SUDDIKSHANA KANNADA NEWS/ DAVANAGERE/ DATE:26-10-2023

ದಾವಣಗೆರೆ: ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ ಮೊಬೈಲ್ ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ಹಸ್ತಾಂತರಿಸಲಾಯಿತು. ಸುಮಾರು 20,00,000 ರೂ. ಮೌಲ್ಯದ ವಿವಿಧ ಕಂಪನಿಯ ಒಟ್ಟು 130 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸ್ ಅಧೀಕ್ಷಕರವರು ಮೊಬೈಲ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸಿದರು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ಕೂಡಲೇ ನೂತನ ಸಿಇಐಆರ್ (Central Equipment Identity Register) ಪೋರ್ಟಲ್ ಗೆ ಭೇಟಿ ನೀಡಿ ತಮ್ಮ ಮೊಬೈಲ್ ನ ಸಂಪೂರ್ಣ ಮಾಹಿತಿಯನ್ನು ಜನರು ನೀಡಿದ್ದರು.

ಈ ವೆಬ್ ಪೋರ್ಟಲ್ ಮೂಲಕ ಕಳುವಾದ, ಸುಲಿಗೆಯಾದ, ಕಾಣೆಯಾದ ಮೊಬೈಲ್ ಗಳ ಬ್ಲಾಕ್ ಮಾಡಲು ಕೇಂದ್ರ ಟೆಲಿ ಕಮ್ಯುನಿಕೇಶನ್ ಇಲಾಖೆಯಿಂದ ಜಾರಿಗೆ ತಂದಿರುವ ನೂತನ ವ್ಯವಸ್ಥೆಯಡಿ ನೋಂದಾಯಿಸಿದ್ದರು. ಮೊಬೈಲ್‌ನ ಸಂಪೂರ್ಣ ಮಾಹಿತಿ ನೀಡಿ ನೊಂದಾಯಿಸಿ ತಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಿದ್ದು, ನಂತರ ಮೊಬೈಲ್ ಗಳಲ್ಲಿ ಹಲವು ಮೊಬೈಲ್‌ಗಳನ್ನು ದಾವಣಗೆರೆ ಪೊಲೀಸರು ನೂತನ ಸಿಇಐಆರ್ ವೆಬ್ ಪೋರ್ಟಲ್ ಮೂಲಕ ಪತ್ತೆ ಮಾಡಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ಕೂಡಲೇ ನೂತನ ಸಿಇಐಆರ್ ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ಮೊಬೈಲ್‌ನ
ಸಂಪೂರ್ಣ ಮಾಹಿತಿ ನೀಡಿ ನೊಂದಾಯಿಸಿಕೊಂಡಿದ್ದರು. ಈ ಪೈಕಿ ಪೋರ್ಟಲ್ ಮೂಲಕ 3290 ಮೊಬೈಲ್ ಗಳನ್ನು ಬ್ಲಾಕ್ ಮಾಡಲಾಗಿದ್ದು, ಅವುಗಳಲ್ಲಿ ಈಗಾಗಲೇ 390 ಮೊಬೈಲ್ ಗಳನ್ನು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೆ ಒಟ್ಟು 520 ಮೊಬೈಲ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.

ಸಾರ್ವಜನಿಕರು ತಮ್ಮ ಮೊಬೈಲ್ ಕಳುವು, ಸುಲಿಗೆ, ಕಾಣೆಯಾಗಿದ್ದಲ್ಲಿ ಕೂಡಲೇ ನೂತನ ಸಿಇಐಆರ್ ವೆಬ್ ಪೋರ್ಟಲ್ ಗೆ ಭೇಟಿ ನೀಡಿ ನೋಂದಾಯಿಸಲು ಹಾಗೂ ಇದರ ಸದುಪಯೋಗ ಪಡೆಯುವಂತೆ ಉಮಾ ಪ್ರಶಾಂತ್ ಅವರು ಮನವಿ ಮಾಡಿದರು.

ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ್ ರವರು, ಸಿಇಎನ್ ಪೊಲೀಸ್ ನಿರೀಕ್ಷಕ ಪಿ. ಪ್ರಸಾದ್, ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ನಿರೀಕ್ಷಕ ರುದ್ರಪ್ಪ, ಪೊಲೀಸ್ ಸಿಬ್ಬಂದಿ ಹಾಗೂ ಮೊಬೈಲ್ ವಾರಸುದಾರರು ಉಪಸ್ಥಿತರಿದ್ದರು.

Exit mobile version