ದಾವಣಗೆರೆ: ಹರಿಹರ ಶಾಸಕ ಬಿ. ಪಿ. ಹರೀಶ್ ಅವರು ಕಾಡಜ್ಜಿ ಕೆರೆ ಸುತ್ತಮುತ್ತ ನಡೆಯುತ್ತಿದ್ದ ಮಣ್ಣು ಗಣಿಗಾರಿಕೆ ತಡೆಯಲು ಹೋರಾಟ ಮಾಡಿದ್ದರ ಪರಿಣಾಮವಾಗಿ ಜಾತಿ ನಿಂದನೆ ಕೇಸ್ ದಾಖಲಾಗಿಸಲಾಗಿದೆ. ಇದು ರಾಜಕೀಯ ಪ್ರೇರಿತ. ಇದರ ವಿರುದ್ಧ ಬೃಹತ್ ಹೋರಾಟ ನಡೆಸಲು ದಾವಣಗೆರೆ ಜಿಲ್ಲಾ ಬಿಜೆಪಿ ಮತ್ತು ಹಿರಿಯ ನಾಯಕರು ನಿರ್ಧರಿಸಿದ್ದಾರೆ.
READ ALSO THIS STORY: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ನಲ್ಲಿ ನಮ್ಮ ಕುಟುಂಬದವರ್ಯಾರು ಸ್ಪರ್ಧಿಸಲ್ಲ: ಜಿ. ಎಂ. ಸಿದ್ದೇಶ್ವರ ಘೋಷಣೆ!
ನಗರದ ಜಿಎಂಐಟಿ ವಸತಿಗೃಹದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಸಭೆ ಸೇರಿ ಚರ್ಚೆ ನಡೆಸಿರುವ ಬಿಜೆಪಿ ನಾಯಕರು, ಸ್ಥಳದಲ್ಲಿಯೇ ಇರದ ವ್ಯಕ್ತಿಯು ಶಾಸಕ ಬಿ. ಪಿ. ಹರೀಶ್ ವಿರುದ್ದ ಜಾತಿನಿಂದನೆ ಕೇಸ್ ದಾಖಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲಿಗರು ಒತ್ತಡ ಹೇರಿ ಕೇಸ್ ದಾಖಲಿಸಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸಚಿವರ ಅಣತಿಯಂತೆ ಕೆಲಸ ಮಾಡುತ್ತಿದೆ. ಸತ್ಯಾಂಶ ಇಲ್ಲದಿದ್ದರೂ ಕೇಸ್ ದಾಖಲಿಸಿರುವುದು ರಾಜಕೀಯ ಪ್ರೇರಿತವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಇನ್ನೆರಡು ದಿನಗಳಲ್ಲಿ ಸಭೆ ಸೇರಿ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಲು ನಿರ್ಧರಿಸಿರುವ ನಾಯಕರು, ರಾಜ್ಯಮಟ್ಟದ ಬಿಜೆಪಿ ನಾಯಕರನ್ನು ಪ್ರತಿಭಟನಾ ಸಭೆಗೆ ಆಹ್ವಾನಿಸಲು ತೀರ್ಮಾನಿಸಿದ್ದಾರೆ. ಅಕ್ರಮ ಮಣ್ಣು ಸಾಗಾಟ, ಉಸ್ತುವಾರಿ ಸಚಿವರ ಭ್ರಷ್ಟಾಚಾರದ ವಿರುದ್ಧ ಮಾತನಾಡುವವರ ದನಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ಕಿರುಕುಳ ನೀಡುವ ಪ್ರವೃತ್ತಿಯೂ ಹೆಚ್ಚಾಗಿದೆ. ಈ ವಿಚಾರವೂ ನನ್ನ ಗಮನಕ್ಕೆ ಬಂದಿದೆ ಎಂದು ಡಾ. ಜಿ. ಎಂ. ಸಿದ್ದೇಶ್ವರ ಅವರು ತಿಳಿಸಿದ್ದಾರೆ.
ಜನವರಿ 12ರಂದು ಕಾಡಜ್ಜಿ ಕೆರೆ ಅಂಗಳದಲ್ಲಿ ನಡೆಯುತ್ತಿದ್ದ ಅಕ್ರಮ ಮಣ್ಣು ಗಣಿಗಾರಿಕೆ ತಡೆಗೆ ಬಿ. ಪಿ. ಹರೀಶ್ ಹೋಗಿದ್ದರು. ಇದನ್ನು ತಡೆಯುವ ಪ್ರಯತ್ನ ಮಾಡಿದ್ದರು. ಸ್ಥಳದಲ್ಲಿ ಈ ವೇಳೆ ಕೆಲವರೊಂದಿಗೆ ವಾಗ್ವಾದವೂ ನಡೆದಿತ್ತು. ಶಾಸಕರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂತರಾಜ್ ಎಂಬುವವರು ಜನವರಿ 14ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ನೀಡಿದ್ದಾರೆ. ಕೆರೆಯ ಮಣ್ಣನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಒಡೆತನಕ್ಕೆ ಸೇರಿದ ಭೂಮಿಗೆ ಬಳಸಿಕೊಳ್ಳಲಾಗಿದೆ ಎಂದು ಶಾಸಕ ಬಿ. ಪಿ. ಹರೀಶ್ ಆರೋಪ ಮಾಡಿದ್ದರು. ಇದಾದ ಎರಡು ದಿನಗಳ ಬಳಿಕ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣ ರಾಜಕೀಯ ಸ್ವರೂಪ ಪಡೆದದ್ದು, ಇದು ರಾಜಕೀಯ ಪ್ರೇರಿತ ಎಂದು ಹೇಳಿದರು.
ಶಾಸಕರ ವಿರುದ್ಧ ಅಟ್ರಾಸಿಟಿ ದೂರು ದಾಖಲಿಸುವ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸತ್ಯಾಸತ್ಯತೆ ಪರಾಮರ್ಶೆ ನಡೆಸಬೇಕಿತ್ತು. ಆದರೆ ಈ ಕೆಲಸ ಮಾಡಿಲ್ಲ ಎಂದು ಹೇಳಿದರು.
ಜಿಎಂಐಟಿಯಲ್ಲಿ ನಡೆದ ಸಭೆಯಲ್ಲಿ 100ಕ್ಕೂ ಹೆಚ್ಚು ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಅವರೂ ಪಾಲ್ಗೊಂಡಿದ್ದರು. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಬಣದಲ್ಲಿ ಹೆಚ್ಚು ಸಕ್ರಿಯರಾಗಿದ್ದ ರಾಜಶೇಖರ್ ನಾಗಪ್ಪ ಅವರು ಜಿಎಂಐಟಿಯಲ್ಲಿ ಪ್ರತ್ಯಕ್ಷರಾಗಿದ್ದು, ಎರಡೂ ಬಣಗಳೂ ಸೇರಿ ಹೋರಾಟ ನಿರ್ಧರಿಸುವ ಕುರಿತಂತೆ ಚರ್ಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿಂಬಾಲಕರ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಅದೇ ರೀತಿಯಲ್ಲಿ ಬಿ. ಪಿ. ಹರೀಶ್ ವಿರುದ್ಧ ದಾಖಲಿಸಿರುವ ಪ್ರಕರಣ ಕೈಬಿಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸಲಾಗುತ್ತದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ವೀರೇಶ್ ಹನಗವಾಡಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಗದೀಶ್ ಮತ್ತಿತರರು ಹಾಜರಿದ್ದರು.





Leave a comment