Site icon Kannada News-suddikshana

ಸಿಎಂ ಪತ್ನಿ ಪಾರ್ವತಿ, ಬೈರತಿ ಸುರೇಶ್ ವಿರುದ್ಧದ ಇಡಿ ನೊಟೀಸ್ ರದ್ದು ಬಿಜೆಪಿ ಷಡ್ಯಂತ್ರಕ್ಕೆ ಸಿಕ್ಕ ಫಲ: ಸೈಯದ್ ಖಾಲಿದ್ ಅಹ್ಮದ್

ಬೈರತಿ ಸುರೇಶ್

ದಾವಣಗೆರೆ: ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯರ ಪತ್ನಿ ಹಾಗೂ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ ಅವರಿಗೆ ಇಡಿ ನೀಡಿದ್ದ ನೊಟೀಸ್ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು ಬಿಜೆಪಿ ಷಡ್ಯಂತ್ರಕ್ಕೆ ಸಿಕ್ಕ ಪ್ರತಿಫಲ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: ಮುಡಾ ಕೇಸ್ ನಲ್ಲಿ ನನ್ನ ಕುಟುಂಬ, ನಾನು ಅನುಭವಿಸಿದ ಮಾನಸಿಕ ಕಿರುಕುಳ ಎಂದಿಗೂ ಮರೆಯಲಾರೆ: ಸಿಎಂ ಸಿದ್ದರಾಮಯ್ಯ!

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೊದಲಿನಿಂದಲೂ ಸಿಎಂ ಸಿದ್ದರಾಮಯ್ಯರ ಜನಪ್ರಿಯತೆ ಕುಸಿಯುವಂತೆ ಮಾಡಲು ಹಾಗೂ ಇಮೇಜ್ ಗೆ ಧಕ್ಕೆ ತರುವಂತ ಕೆಲಸ ಮಾಡಿದ್ದ ಕೇಂದ್ರ ಸರ್ಕಾರ ಹಾಗೂ ರಾಜ್ಯ
ಬಿಜೆಪಿಗೆ ಮುಖಭಂಗವಾಗಿದೆ. ಇನ್ನು ಮುಂದಾದರೂ ಕುತಂತ್ರ ರೂಪಿಸದೇ ರಾಜಕಾರಣ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯರನ್ನು ಸಿಲುಕಿಸಲು ಸಾಕಷ್ಟು ತಂತ್ರಗಾರಿಕೆ ನಡೆಸಿತ್ತು. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಜನಪ್ರಿಯ ಆಡಳಿತವನ್ನು ನೀಡುತ್ತಿದ್ದಾರೆ. ಜನರ ಮನದಲ್ಲಿಯೂ ಉಳಿದಿದ್ದಾರೆ. ಇದನ್ನು ಸಹಿಸದ ಬಿಜೆಪಿಯು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್ ಅವರನ್ನು ಸಿಲುಕಿಸಲು ಇನ್ನಿಲ್ಲದ ಕಸರತ್ತು ನಡೆಸಿತ್ತು. ಈಗ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ಇಡಿ ತರಾಟೆಗೆ ತೆಗೆದುಕೊಂಡಿದೆ. ರಾಜಕೀಯವಾಗಿ ಮಾಡುವ ಹೋರಾಟಕ್ಕೆ ನೀವೇಕೆ ಬೆಂಬಲ ನೀಡುತ್ತೀರಾ? ಮತದಾರರ ಬಳಿ ಹೋಗಿ ರಾಜಕಾರಣ ಮಾಡಲು ಹೇಳಿದೆ. ಈ ಮೂಲಕ ಬಿಜೆಪಿಯ ಷಡ್ಯಂತ್ರ ಬಟಾಬಯಲಾಗಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ನೇತೃತ್ವದ ಸರ್ಕಾರಗಳು, ಸಚಿವರು, ಶಾಸಕರು, ಸಂಸದರ ಮೇಲೆ ಇಡಿ ದಾಳಿ ಹೊಸದೇನಲ್ಲ. ವಿಪಕ್ಷಗಳನ್ನು ಸ್ವಾಯತ್ತ ಸಂಸ್ಥೆಗಳಾದ ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ದಾಳಿ ನಡೆಸುವುದನ್ನು ಇನ್ನು ಮುಂದಾದರೂ ಕೇಂದ್ರ ಸರ್ಕಾರವು ಬಿಡಬೇಕು. ವಾಮಮಾರ್ಗದಲ್ಲಿ ಕಾಂಗ್ರೆಸ್ ನಾಯಕರನ್ನು ಹೆದರಿಸುವ ತಂತ್ರ ಫಲಿಸದು ಎಂದು ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.

Exit mobile version