ಭದ್ರಾವತಿ: ಜನವರಿ 24 ರಿಂದ ಫೆಬ್ರವರಿ 1ರವರೆಗೆ ಭದ್ರಾವತಿ ಪಟ್ಟಣದಲ್ಲಿ ಆಯೋಜನೆಗೊಂಡಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವದ 5 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳ ಸಮಾಗಮದಲ್ಲಿ ಭಕ್ತಿಯ ಮಹಾಪರ್ವವಾಗಿ ಸಂಪನ್ನಗೊಂಡಿತು.
ಉಕ್ಕಿನ ನಗರಿ ಭದ್ರಾವತಿಯಲ್ಲಿ ಕಳೆದ ಒಂಬತ್ತು ದಿನಗಳಿಂದ ನಡೆದ ಭಕ್ತಿ, ಜ್ಞಾನ ಮತ್ತು ಸಂಸ್ಕೃತಿಯ ಮಹಾಸಂಗಮ ‘ತರಳಬಾಳು’ ಹುಣ್ಣಿಮೆ’ ಮಹೋತ್ಸವಕ್ಕೆ ಆದಿತ್ಯವಾರ ಅದ್ದೂರಿ ತೆರೆ ಬಿದ್ದಿತು.
ಸಮಾರೋಪದ ಪಾವನ ಕ್ಷಣದಲ್ಲಿ ಸಿರಿಗೆರೆ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮದ್ಯಾಹ್ನ ಸಾಲಂಕೃತ ಪಲ್ಲಕ್ಕಿ ಉತ್ಸವದಲ್ಲಿ ಸಂಜೆ ಸಿಂಹಾಸನರೋಹಣಗೈದು ಭಕ್ತಕೋಟಿಗೆ ದರ್ಶನ ನೀಡಿ ಆಶೀರ್ವದಿಸಿದರು.
ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 :
ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸದ್ದರ್ಮ ಸಿಂಹಾಸನರೋಹಣ ಅಲಂಕರಿಸಿ ಆಶೀರ್ವಚನ ದಯಪಾಲಿಸಿ ಪ್ರತಿ ವರ್ಷ ತರಳಬಾಳು ಹುಣ್ಣಿಮೆಯಲ್ಲಿ 10 ಹುತಾತ್ಮ ಯೋಧರ ಕುಟುಂಬಗಳಿಗೆ ನಮ್ಮ ಮಠದಿಂದ ತಲಾ 1 ಲಕ್ಷ ರೂಗಳ ಆರ್ಥಿಕ ನೆರವಿನ ಸಾಂತ್ವನ ನೀಡುತ್ತಾ ಬಂದಿದ್ದೇವೆ. ಆದರೆ ದೇಶಕ್ಕಾಗಿ ಮಡಿದ ಸೈನಿಕರ ಜೀವ ತರಲು ಸಾಧ್ಯವಿಲ್ಲ. ಸೈನಿಕರ ಮಡದಿಯಂತಹ ತ್ಯಾಗ ಜೀವಿ ಮತ್ತೋದಿಲ್ಲ. ಮಠಕ್ಕೆ ಸ್ವಾಮಿಜೀಯಾಗುವುದು ಬಹಳ ಸುಲಭ. ಆದರೆ ವೀರಯೋಧರ ಮಡದಿಯಾಗುವುದು, ಮಡದಿಯಾಗಿ ಜೀವಿಸುವುದು ಕಷ್ಟದ ಕೆಲಸ ಹಾಗೂ ಅತ್ಯಂತ ದೊಡ್ಡ ಗೌರವ ಎಂದು ಭಾವುಕ ನುಡಿಗಳ ಮೂಲಕ ಸಂದೇಶ ನೀಡಿದರು.
ಮಠಕ್ಕೆ ಪೀಠಾಧಿಪತಿ ಆಗುವುದು ದೊಡ್ಡ ವಿಷಯವಲ್ಲ. ಆದರೆ ದೇಶಕ್ಕಾಗಿ ಪ್ರಾಣ ತೆರೆದು ಹುತಾತ್ಮರಾದ ವೀರ ಯೋಧರ ಪತ್ನಿಯರಾಗಿರುವುದು ಅತ್ಯಂತ ದೊಡ್ಡ ಗೌರವ. ಪ್ರಾಣದ ಹಂಗು ತೊರೆದು ಶತ್ರುಗಳೊಂದಿಗೆ ಹೋರಾಡಿ ದೇಶವನ್ನು ರಕ್ಷಿಸಿ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ಅಭಿನಂದನೆ ಸಲ್ಲಿಸಿ, ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದಿಂದ ತಲಾ ಒಂದು ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ವಿತರಿಸಿ ಆಶೀರ್ವದಿಸಿದರು.
“ವಿಧವೆ” ಎಂದು ಕರೆಯುವುದು ಅವಮಾನಕಾರಿ:
ವೀರ ಯೋಧರ ಪತ್ನಿಯರನ್ನು ‘ವಿಧವೆ’ ಎಂದು ಕರೆಯುವುದು ಅವಮಾನಕಾರಿ. ಅದರ ಬದಲು ಅವರನ್ನು ಶುಭ ಸಮಾರಂಭಗಳಿಗೆ ಆಹ್ವಾನಿಸಿ ಆಶೀರ್ವಾದ ಪಡೆಯಬೇಕು. ನಿಮ್ಮ ಮಕ್ಕಳ ಮದುವೆಗಳಲ್ಲಿ ಅವರನ್ನು ಕರೆಸಿ ಗೌರವಿಸುವ ಪರಂಪರೆ ಬೆಳೆಸಬೇಕು. ಹುತಾತ್ಮ ಯೋಧರಿಗೆ ಎಷ್ಟು ಹಣ ನೀಡಿದರೂ ಸಾಲದು. ಗುಂಡು ಬಂದರೆ ಎದೆ ಮುಂದೆ ನಿಲ್ಲಿಸುವಂತಹ ಧೈರ್ಯವಿರುವ ಯೋಧರ ತ್ಯಾಗವನ್ನು ದೇಶ ಎಂದಿಗೂ ಮರೆಯಬಾರದು. ಸರ್ಕಾರಗಳು ವೀರ ಯೋಧರ ಕುಟುಂಬಗಳಿಗೆ ಸೂಕ್ತ ಜೀವನ ಭದ್ರತೆ, ಸೌಲಭ್ಯಗಳು ಹಾಗೂ ಪರಿಹಾರ ಧನ ಒದಗಿಸಬೇಕು ಎಂದು ಕರೆ ನೀಡಿದರು.
ಯೋಧರು ಗಡಿಯಲ್ಲಿ ಎದೆಕೊಟ್ಟು ದೇಶ ಕಾಯುವುದರಿಂದ ನಾವು ನೆಮ್ಮದಿಯಿಂದ ಇದ್ದೇವೆ. ಹುತಾತ್ಮರಾದ ಯೋಧರ ಜೀವ ಮರಳಿ ತರಲು ಸಾಧ್ಯವಿಲ್ಲ, ಆದರೆ ಅವರ ಕುಟುಂಬಕ್ಕೆ ಭದ್ರತೆ ಒದಗಿಸುವುದು ಸರ್ಕಾರ ಮತ್ತು ಸಮಾಜದ ಕರ್ತವ್ಯ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಕೆಟ್ಟ ಸುದ್ದಿಗಳಿಂದ ಅನೇಕ ಸಂಸಾರಗಳು ಬೀದಿಗೆ ಬರುತ್ತಿವೆ. ಸರ್ಕಾರ ಈ ಕೂಡಲೇ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಕಠಿಣ ಕಾಯ್ದೆ ತರಬೇಕು ಎಂದು ಶ್ರೀಗಳು ಒತ್ತಾಯಿಸಿದರು.





Leave a comment