ಬೆಂಗಳೂರು: ಆರ್ ಟಿಐ ಕಾರ್ಯಕರ್ತಹಾಗೂ ಸಿಎಂ ಸಿದ್ದರಾಮಯ್ಯರ ಭ್ರಷ್ಟಾಚಾರದ ವಿರುದ್ಧ ರಣಕಹಳೆ ಊದಿದ್ದ ಸ್ನೇಹಮಯಿ ಕೃಷ್ಣ ಬಂಧನ ಸೇಡಿನ ರಾಜಕಾರಣದ ಪರಮಾವಧಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನಿಖಾ ಸಂಸ್ಥೆಗಳ ದುರುಪಯೋಗ:
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತನಿಖಾ ಸಂಸ್ಥೆಗಳನ್ನು, ಪೊಲೀಸ್ ವ್ಯವಸ್ಥೆಯನ್ನು ನ್ಯಾಯದ ಪರವಾಗಿ ಹೋರಾಡುವವರನ್ನು ಹತ್ತಿಕ್ಕಲು ಬಳಸಿಕೊಳ್ಳುತ್ತಿದೆ. ಇದರ ಭಾಗವಾಗಿ ರಾಜ್ಯ ಕಂಡ ಅತೀ ದೊಡ್ಡ ಹಗರಣ ಮುಡಾ ನಿವೇಶನಗಳ ಲೂಟಿಕೋರತನದ ವಿರುದ್ಧ ದೂರು ನೀಡಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಆರೋಪಿತ ಅಧಿಕಾರಿಯೊಬ್ಬರ ದೂರು ಆಧರಿಸಿ ಸಿಸಿಬಿ ಪೋಲಿಸರು ಕ್ರಮ ಅನುಸರಿಸದೇ ಬಂಧಿಸಿರುವ ನಡೆ ದೂರುದಾರನ ವಿರುದ್ಧ ಕಾಂಗ್ರೆಸ್ ಸರ್ಕಾರ ಸೇಡು ತೀರಿಸಿಕೊಳ್ಳವ ದುರುದ್ದೇಶದಿಂದ ಕೂಡಿದೆ ಎಂದು ಗುಡುಗಿದ್ದಾರೆ.
ಬಂಧನದ ಕ್ರಮಕ್ಕೆ ಆಕ್ಷೇಪ:
ಮುಖ್ಯಮಂತ್ರಿಗಳ ವಿರುದ್ಧ, ಮುಡಾ ಹಗರಣದಲ್ಲಿ ಭಾಗಿಯಾದ ಪ್ರಭಾವಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರೆಂಬ ಹಿನ್ನೆಲೆಯಲ್ಲಿ ಈ ಹಿಂದಿನಿಂದಲೂ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಒಂದಿಲ್ಲೊಂದು ಸುಳ್ಳು ದೂರುಗಳನ್ನು ದಾಖಲಿಸಿಕೊಂಡು ಬಂಧಿಸಲು ಯತ್ನಿಸುತ್ತಿದ್ದ ಪೊಲೀಸರು ಇದೀಗ ಸತ್ಯ ಹೊರಬರದಂತೆ ತಡೆಯಲು ಸ್ನೇಹಮಯಿ ಕೃಷ್ಣ ಅವರನ್ನು ಕೊನೆಗೂ ಹತಾಶ ಮನಸ್ಥಿತಿಯಿಂದ ನ್ಯಾಯಾಲಯದಲ್ಲಿ ಸದರಿ ಪ್ರಕರಣದ ವಿಚಾರಣೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲೇ ಕೋರ್ಟಿನ ಹೊರಗಡೆ ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದಮನ ಮಾಡಲು ಹೊರಟ ನಾಚಿಕೆಗೇಡಿತನದ ಪರಮಾವಧಿಯಾಗಿದೆ ಎಂದು ಹೇಳಿದ್ದಾರೆ.
ತಾರತಮ್ಯದ ಧೋರಣೆ:
ಸಾಮಾಜಿಕ ಜಾಲತಾಣದ ಸಂಬಂಧ ನಿತ್ಯವೂ ನೂರಾರು ದೂರುಗಳು ದಾಖಲಾಗುತ್ತಿವೆ, ಸಾಮಾನ್ಯರ ದೂರುಗಳನ್ನು ದಾಖಲಿಸಿಕೊಳ್ಳುವಲ್ಲಿ ತಾತ್ಸಾರ ತೋರುವ ಪೊಲೀಸರು ಈ ಪ್ರಕರಣದಲ್ಲಿ ವಿಪರೀತ ಕಾಳಜಿ ವಹಿಸಿ ಸ್ನೇಹಮಯಿ ಕೃಷ್ಣ ಅವರನ್ನು ಕ್ರಿಮಿನಲ್ ಆರೋಪಿಯಂತೆ, ಭಯೋತ್ಪಾದಕನಂತೆ ಬಂಧಿಸಿ ನಡೆಸಿಕೊಂಡಿರುವುದರ ಹಿಂದೆ ಭ್ರಷ್ಟ ವ್ಯವಸ್ಥೆ ಹಾಗೂ ಹಗರಣದ ವಾಸ್ತವತೆಯನ್ನು ರಕ್ಷಿಸುವ ದುರುದ್ದೇಶ ಹಾಗೂ ಪ್ರಭಾವಕ್ಕೆ ಮಣಿಯದ ಪ್ರಾಮಾಣಿಕ ಸಾಮಾಜಿಕ ಕಾರ್ಯಕರ್ತನ ಸೊಲ್ಲಡಗಿಸುವ ಕುತಂತ್ರ ಅಡಗಿದೆ, ಈ ಮೂಲಕ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ದನಿ ಎತ್ತುವವರನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಿದಂತಿದೆ ಎಂದು ಆರೋಪಿಸಿದ್ದಾರೆ.
ಭ್ರಷ್ಟಾಚಾರ ರಕ್ಷಣೆ:
ಸುಳ್ಳು, ಭ್ರಷ್ಟಾಚಾರ, ದೌರ್ಜನ್ಯಗಳನ್ನು ಮುಚ್ಚಿಹಾಕಲು ಪೊಲೀಸ್ ವ್ಯವಸ್ಥೆ ಹಾಗೂ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ದೇಶದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಸುಭದ್ರವಾಗಿದೆ, ಬಲಿಷ್ಟವಾಗಿದೆ ಎಂಬ ಅರಿವಿರಲಿ. ದುರ್ಮಾರ್ಗದ ನಡೆಗಳು ಈ ಸರ್ಕಾರಕ್ಕೆ ತಿರುಗುಬಾಣವಾಗಲಿದೆ. ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಮುಚ್ಚಿ ಹಾಕಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಸರ್ಕಾರದ ವಿರುದ್ಧ ತನ್ನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಿದೆ
ಎಂದು ಎಚ್ಚರಿಕೆ ನೀಡಿದ್ದಾರೆ.





Leave a comment