Home ದಾವಣಗೆರೆ ಬಿಜೆಪಿ ಬಂಡಾಯದ ಬೇಗುದಿ: ಅಸಮಾಧಾನ ಶಮನಕ್ಕೆ ಮದ್ದೆರೆಯಲು ದಾವಣಗೆರೆಗೆ ಮಾರ್ಚ್5ರ ನಾಳೆ ಬಿ. ವೈ. ವಿಜಯೇಂದ್ರ!
ದಾವಣಗೆರೆಬೆಂಗಳೂರು

ಬಿಜೆಪಿ ಬಂಡಾಯದ ಬೇಗುದಿ: ಅಸಮಾಧಾನ ಶಮನಕ್ಕೆ ಮದ್ದೆರೆಯಲು ದಾವಣಗೆರೆಗೆ ಮಾರ್ಚ್5ರ ನಾಳೆ ಬಿ. ವೈ. ವಿಜಯೇಂದ್ರ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಬಿಜೆಪಿಯಲ್ಲಿ ಮತ್ತೆ ಬಂಡಾಯದ ಬೇಗುದಿ ಭುಗಿಲೆದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ವಿರುದ್ಧ ಬಿಜೆಪಿ ನಾಯಕರು ಸಿಟ್ಟು ಹೊರಹಾಕಿದ್ದರು. ಬಹಿರಂಗವಾಗಿಯೇ ಬಿಜೆಪಿಯು ಒಡೆದ ಮನೆ, ಮೂರು ಬಾಗಿಲು ಆಗಿದೆ ಎಂದು ಹೇಳಿದ್ದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸೋಲಿಗೆ ಕೆಲ ಬಿಜೆಪಿ ನಾಯಕರೇ ತಂತ್ರ ರೂಪಿಸಿದ್ದಾರೆ. ಶಾಮನೂರು ಶಿವಶಂಕರಪ್ಪರ ಪರ ಕೆಲಸ ಮಾಡಲು ಮುಂದಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಬಿಜೆಪಿಯ ಬಂಡಾಯ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಒಳಗೊಳಗೆ ಅಸಮಾಧಾನ, ನೋವು ತಂದಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಮಾರ್ಚ್ 5 ರ ನಾಳೆ ದಾವಣಗೆರೆಗೆ ಆಗಮಿಸುತ್ತಿದ್ದಾರೆ. ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಂಗವಾಗಿ ಏರ್ಪಡಿಸಲಾಗಿರುವ ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯೇಂದ್ರ ಕಾರ್ಯಕ್ರಮಗಳೇನು? 

ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ರಸ್ತೆ ಮೂಲಕ ಹಾವೇರಿ, ರಾಣೇಬೆನ್ನೂರು, ಹರಿಹರ ಮಾರ್ಗವಾಗಿ ದಾವಣಗೆರೆಗೆ ಬೆಳಿಗ್ಗೆ ಹತ್ತು ಗಂಟೆಗೆ ಆಗಮಿಸುತ್ತಿದ್ದಾರೆ. ಸಭೆಯಲ್ಲಿ ಬಿಜೆಪಿ ಬಂಡಾಯ, ವಿಧಾನಸಭಾ ಉಪಚುನಾವಣೆಯಲ್ಲಿ ಯಾವ ರೀತಿ ತಂತ್ರಗಾರಿಕೆ ರೂಪಿಸಬೇಕು. ಇದುವರೆಗೆ ಗೆಲ್ಲದ ಕ್ಷೇತ್ರದಲ್ಲಿ ಕಮಲ ಅರಳಿಸಲು ವಿಜಯೇಂದ್ರ ಸಮಾಲೋಚನೆ ನಡೆಸಲಿದ್ದಾರೆ. ಈ ನಡುವೆ ಅಸಮಾಧಾನಿತರು ಜಿಎಂಐಟಿಯಲ್ಲಿ ಸಭೆ ಕರೆದಿದ್ದಾರೆ. ವಿಜಯೇಂದ್ರ ಅವರ ಜೊತೆ ಭಿನ್ನಮತೀಯ ನಾಯಕರು ಚರ್ಚೆ ನಡೆಸುತ್ತಾರೋ, ಬಂಡಾಯದ ಕಹಳೆ ಮೊಳಗಿಸುತ್ತಾರೋ ಎಂಬುದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ.

ಭಾರೀ ವಿರೋಧ: 

ಹೊನ್ನಾಳಿ ಬಿಜೆಪಿ ಮುಖಂಡ ಶಾಂತರಾಜ್ ಪಾಟೀಲ್, ಜಗಳೂರು ಮಾಜಿ ಶಾಸಕ ಹೆಚ್. ಪಿ. ರಾಜೇಶ್, ಚನ್ನಗಿರಿಯ ಹೆಚ್. ಎಸ್. ಶಿವಕುಮಾರ್, ಜಿ. ಎಸ್. ಶ್ಯಾಮ್, ಅಣಬೇರು ಜೀವನಮೂರ್ತಿ, ಮಹೇಶ್ ಸೇರಿದಂತೆ ಹಲವರು ಬಹಿರಂಗವಾಗಿಯೇ
ಯಡಿಯೂರಪ್ಪ ಹಾಗೂ ವಿಜಯೇಂದ್ರರು ಹೋದ ಕಡೆಗಳಲ್ಲಿ 2028ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತಿರುವುದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು.

ಅತೃಪ್ತ ನಾಯಕರು ಹೇಳಿದ್ದೇನು?

2028ರ ವಿಧಾನಸಭೆ ಚುನಾವಣೆಗೆ ದಾವಣಗೆರೆ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದ ಬಿಜೆಪಿ ಅಸಮಾಧಾನಿತ ಮುಖಂಡರು, ಈ ಕುರಿತು ಚರ್ಚಿಸಲು ಮಾರ್ಚ್ 5ರ ಗುರುವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆಯ ಜಿಎಂಐಟಿ ವಸತಿ ಗೃಹದಲ್ಲಿ ಬೃಹತ್ ಸಭೆ ಕರೆದಿರುವುದಾಗಿ ಹೇಳಿದ್ದರು. ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಮಂಡಲದಿಂದ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಲಿದ್ದಾರೆ. “ನಾವೆಲ್ಲರೂ ಒಟ್ಟಾಗಿ ಹಿರಿಯ ನಾಯಕರಾದ ಜಿ.ಎಂ. ಸಿದ್ದೇಶ್ವರ್ ಮತ್ತು ಶಾಸಕ ಬಿ.ಪಿ. ಹರೀಶ್ ಅವರ ನೇತೃತ್ವದಲ್ಲಿ ಚರ್ಚೆ ನಡೆಸಲಿದ್ದೇವೆ. ಒಂದು ವೇಳೆ ಜಿಲ್ಲಾ ಮಟ್ಟದಲ್ಲಿ ನಮಗೆ ನ್ಯಾಯ ಸಿಗದಿದ್ದರೆ, ರಾಜ್ಯ
ಮತ್ತು ರಾಷ್ಟ್ರ ಮಟ್ಟದ ನಾಯಕರನ್ನು ಭೇಟಿ ಮಾಡಿ ಹೋರಾಟ ನಡೆಸಲು ಸಿದ್ಧರಿದ್ದೇವೆ” ಎಂದು ಬಹಿರಂಗವಾಗಿಯೇ ಎಚ್ಚರಿಕೆ ಕೊಟ್ಟಿದ್ದರು.

ಭಾರತೀಯ ಜನತಾ ಪಾರ್ಟಿಯು ಶಿಸ್ತಿನ ಮತ್ತು ರಾಷ್ಟ್ರೀಯ ಸಿದ್ಧಾಂತವುಳ್ಳ ಪಕ್ಷವಾಗಿದ್ದು, ಇಲ್ಲಿ ಅಭ್ಯರ್ಥಿಗಳ ಆಯ್ಕೆಗೆ ತನ್ನದೇ ಆದ ಸಂಸದೀಯ ಮಂಡಳಿಯ ವ್ಯವಸ್ಥೆಯಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಅವರು ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಈಗಲೇ ಅಭ್ಯರ್ಥಿಗಳನ್ನು ಘೋಷಿಸುತ್ತಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಮಾಡುತ್ತಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಏಕಪಕ್ಷೀಯ ನಿರ್ಧಾರ: ಚುನಾವಣೆಗೂ ಎರಡು ವರ್ಷ ಮೊದಲೇ ಅಭ್ಯರ್ಥಿಗಳನ್ನು ಘೋಷಿಸುವುದು ಪ್ರಾದೇಶಿಕ ಪಕ್ಷಗಳ ಸಂಸ್ಕೃತಿಯೇ ಹೊರತು ರಾಷ್ಟ್ರೀಯ ಪಕ್ಷವಾದ ಬಿಜೆಪಿಯದ್ದಲ್ಲ. ಹೊನ್ನಾಳಿಯಿಂದ ಶಾಂತರಾಜ್ ಪಾಟೀಲ್, ಜಗಳೂರಿನಿಂದ ಹೆಚ್.ಪಿ. ರಾಜೇಶ್, ಚನ್ನಗಿರಿಯಿಂದ ಹೆಚ್.ಎಸ್. ಶಿವಕುಮಾರ್, ಮಾಯಕೊಂಡದಿಂದ ಶ್ಯಾಮ್, ಹರಪ್ಪನಹಳ್ಳಿಯಿಂದ ನಂಜೇಗೌಡ್ರು ಸೇರಿದಂತೆ ಅನೇಕ ನಿಷ್ಠಾವಂತರು ಆಕಾಂಕ್ಷಿಗಳಾಗಿದ್ದಾರೆ. ಹೀಗಿದ್ದರೂ ಹೋದಲ್ಲೆಲ್ಲಾ ಅಭ್ಯರ್ಥಿಗಳನ್ನು ಘೋಷಿಸುತ್ತಿರುವುದು ಹಿರಿಯ ನಾಯಕರಿಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿಕಾರಿದ್ದರು.

Share

Leave a comment

Leave a Reply

Your email address will not be published. Required fields are marked *