Site icon Kannada News-suddikshana

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಶೀಘ್ರವೇ ಬಸ್‌ ಪ್ರಯಾಣ ದರ ಹೆಚ್ಚಳದ ಬಗ್ಗೆ ಸುಳಿವು ನೀಡಿದ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಶೀಘ್ರವೇ ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಸುಳಿವು ನೀಡಿದ್ದಾರೆ.

ಬಸ್‌ ಪ್ರಯಾಣ ದರ ಏರಿಕೆಯ ಬಗ್ಗೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ”2014ರಲ್ಲಿ ಬಿಎಂಟಿಸಿ, 2020ರಲ್ಲಿ ಕೆಎಸ್‌ಆರ್‌ಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಬಸ್‌ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಆ ನಂತರ ಡೀಸೆಲ್‌ ಬೆಲೆ, ಬಸ್‌ನ ಬಿಡಿ ಭಾಗಗಳ ದರ, ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನದಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಡೀಸೆಲ್‌ ಬೆಲೆ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ಆರ್ಥಿಕ ಹೊರೆ ಹೆಚ್ಚಿದ್ದು, ಈ ಹೊರೆ ಸರಿದೂಗಿಸಬೇಕಿದೆ,” ಎಂದು ಹೇಳುವ ಮೂಲಕ ಪರೋಕ್ಷವಾಗಿ ಪ್ರಯಾಣ ದರ ಹೆಚ್ಚಳದ ಸುಳಿವು ನೀಡಿದರು.

”ಬಸ್‌ ಪ್ರಯಾಣ ದರ ಏರಿಕೆ ಮಾಡುವುದಕ್ಕೆ ಯಾವುದೇ ನಿಗದಿತ ಕಾಲಮಿತಿಯಿಲ್ಲ. ಪ್ರತಿ ವರ್ಷವೂ ಪ್ರಯಾಣ ದರ ಹೆಚ್ಚಳ ಮಾಡಬಹುದು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಪ್ರತಿ ವರ್ಷ ವಿದ್ಯುತ್‌ ಬೆಲೆ ಹೆಚ್ಚಳ ಮಾಡುತ್ತದೆ. ಅದೇ ರೀತಿ ಕಾಲಕಾಲಕ್ಕೆ ಬಸ್‌ ಪ್ರಯಾಣ ದರ ಪರಿಷ್ಕರಿಸಿದರೆ ಸಾರ್ವಜನಿಕರಿಗೂ ಸಮಸ್ಯೆ ಆಗುವುದಿಲ್ಲ,” ಎಂದು ಹೇಳಿದರು.

Exit mobile version