Site icon Kannada News-suddikshana

ಪಾನಿಪೂರಿ ಸೇವಿಸಿ ಅಸ್ವಸ್ಥಗೊಂಡಿದ್ದ ಮಕ್ಕಳು: ಚಿಕಿತ್ಸೆ ಫಲಕಾರಿಯಾಗದೇ ಓರ್ವ ಬಾಲಕ ಸಾವು

SUDDIKSHANA KANNADA NEWS/ DAVANAGERE/ DATE:17-03-2024

ದಾವಣಗೆರೆ: ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದಲ್ಲಿ ಪಾನಿಪೂರಿ ಸೇವಿಸಿ ಅಸ್ವಸ್ಥಗೊಂಡಿದ್ದ 19 ಮಕ್ಕಳ ಪೈಕಿ ಓರ್ವ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ.

ಮಲೇಬೆನ್ನೂರಿನ ಇರ್ಫಾನ್ ಎಂಬುವವರ ಪುತ್ರ ಹಜರತ್ ಬಿಲಾಲ್  (6) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ಹಜರತ್ ಬಿಲಾಲ್ ಸಹ ಪಾನಿಪೂರಿ ಸೇವಿಸಿ ಅಸ್ವಸ್ಥಗೊಂಡಿದ್ದ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕಾರಣಕ್ಕೆ ಮಲೇಬೆನ್ನೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಗಂಭೀರ ಎಂದು ಅರಿತ ಪೋಷಕರು ದಾವಣಗೆರೆ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬಾಲಕ ಮೃತಪಟ್ಟಿದ್ದಾನೆ.

ಮಾರ್ಚ್ 15ರಂದು ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳು ಉಪವಾಸ ಮಾಡಿದ್ದರು. ವ್ರತ ಇದ್ದ ಮಕ್ಕಳು ಉಪವಾಸ ಅಂತ್ಯ ಮಾಡಿ ಮಲೇಬೆನ್ನೂರಿನ ಜಾಮೀಯಾ ಮಸೀದಿ ಬಳಿ ಪಾನಿಪೂರಿ ಸೇವಿಸಿದ್ದ ಮಕ್ಕಳ ಪೈಕಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದರು. ಈ ಪೈಕಿ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕರೆದುಕೊಂಡು ಬಂದಿದ್ದರು.

ಪಾನಿಪೂರಿ ಸೇವಿಸಿದ್ದ ಮಕ್ಕಳು ವಾಂತಿ ಭೇದಿ, ಹೊಟ್ಟೆ ನೋವಿನಿಂದ ಬಳಲಿದ್ದರು. ಅಸ್ವಸ್ಥಗೊಂಡಿದ್ದ ಮಕ್ಕಳ ಪೈಕಿ ನಾಲ್ವರು ಗಂಭೀರವಾಗಿದ್ದರು. ಅದೃಷ್ಟವಶಾತ್ ಇನ್ನು ಮೂವರು ಮಕ್ಕಳು ಚೇತರಿಸಿಕೊಂಡಿದ್ದಾರೆ. ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಘಟನೆ ಬಳಿಕ ಪೋಷಕರು ಪಾನಿಪೂರಿ ಮಾಲೀಕನ ವಿರುದ್ಧ ಆಕ್ರೋಶ ಹೊರಹಾಕಿದ್ದರು.

Exit mobile version