Site icon Kannada News-suddikshana

ಅಡಿಕೆ ಬೆಳೆಗಾರರೇ ಗಮನಿಸಿ… ಅಡಿಕೆ ಮರಗಳಿಗೆ ಕೊಳೆ ರೋಗ ಬಂದಿದೆಯಾ…? ರಕ್ಷಣಾ ಕ್ರಮಗಳು ಇಲ್ಲಿವೆ ನೋಡಿ…!

SUDDIKSHANA KANNADA NEWS/ DAVANAGERE/ DATE:05-09-2024

ದಾವಣಗೆರೆ: ಅಡಿಕೆ ಬೆಳೆಗಾರರೇ ಗಮನಿಸಿ. ಅಡಿಕೆ ಮರಗಳಿಗೆ ಕೊಳೆ ರೋಗ ಬಂದಿದೆಯಾ? ಹಾಗಿದ್ದರೆ ರಕ್ಷಣಾ ಕ್ರಮಗಳು ಇಲ್ಲಿವೆ ನೋಡಿ.

ಪ್ರಸ್ತುತ ಹೆಚ್ಚು ಮಳೆ, ಮೋಡಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಅಧಿಕ ಆಧ್ರತೆ (ಶೇ. 90 ಕ್ಕಿಂತ ಹೆಚ್ಚು) ಮತ್ತು ಸೂರ್ಯನ ಬೆಳಕಿನ ಕೊರತೆಯಿಂದ ಕೊಳೆ ರೋಗವು ಹೆಚ್ಚಿರುವುದರಿಂದ ಅಡಿಕೆ ಬೆಳಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಶಿವಮೊಗ್ಗ ನವಿಲೆಯ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವಪ್ಪರ್ ಅವರು ಸಂರಕ್ಷಣಾ ಕ್ರಮಗಳನ್ನು ನೀಡಿದ್ದಾರೆ.

ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದು. ಕೊಳೆಬಾಧಿತ ಬಿದ್ದಂತಹ ಕಾಯಿಗಳನ್ನು ಆರಿಸಿ ಹೊರಗಡೆ ಹಾಕಬೇಕು.

ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಹಾಗೂ ತೋಟದ ಅಂಚಿನ ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು. ವೈಜ್ಞಾನಿಕವಾಗಿ ತಯಾರಿಸಿದ ರಸಸಾರ 7ರ ಶೇ.1 ರ ಬೋರ್ಡೋದ್ರಾವಣ ಅಥವಾ ಶೇ.0.2 ರ ಮೆಟಲಾಕ್ಸಿಲ್ ಎಂ.ಜಡ್ (2 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ಅಥವಾ ಶೇ.0.2 ರ ಮೆಟಲಾಕ್ಸಿಲ್ + ಮ್ಯಾಂಕೋಜೆಬ್ (2 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ಅಥವಾ ಶೇ. 0.1 ರ ಮ್ಯಾಂಡಿಪ್ರ‍್ರೇಪಮಿಡ್ (1 ಮಿ.ಲಿ ಪ್ರತಿ ಲೀ. ನೀರಿನಲ್ಲಿ) ಅಥವಾ ಶೇ. 0.3 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ದಿಂದ ಗೊನೆಗಳಿಗೆ ಹಾಗೂ ಎಲೆಗಳಿಗೆ ಮತ್ತು ಸುಳಿಭಾಗಕ್ಕೆ ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಿ. ಹೀಗೆ ಮಾಡುವುದರಿಂದ ಕೊಳೆರೋಗದ ಜೊತೆಗೆ ಎಲೆಚುಕ್ಕೆ ರೋಗವನ್ನು ನಿಯಂತ್ರಿಸಲು ಸಹಾಯವಾಗುತ್ತದೆ.

ಈ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದಲ್ಲಿ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ ಎಂದು ಡಾ. ನಾಗರಾಜಪ್ಪ ತಿಳಿಸಿದ್ದಾರೆ.

Exit mobile version