SUDDIKSHANA KANNADA NEWS/ DAVANAGERE/ DATE:19-04-2023
ದಾವಣಗೆರೆ (DAVANAGERE): ಮಾಯಕೊಂಡ ಬಿಜೆಪಿ (BJP) ಬಂಡಾಯ ಅಭ್ಯರ್ಥಿಯಾಗಿ ಆರ್. ಎಲ್. ಶಿವಪ್ರಕಾಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಬಸವರಾಜ್ ನಾಯ್ಕ್ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಗಳೆಲ್ಲರೂ ಸೇರಿ ಆರ್. ಎಲ್. ಶಿವಪ್ರಕಾಶ್ ರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ.
ನಗರದ ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಲಾಯಿತು. ನೂರಾರು ಯುವಕರು ಶಿವಪ್ರಕಾಶ್ ರ ಪರ ಘೋಷಣೆ ಹಾಕಿದರು. ಬಳಿಕ ಮಾತನಾಡಿದ ಶಿವಪ್ರಕಾಶ್, ಬಸವರಾಜ್ ನಾಯ್ಕ್ ಅವರಿಗೆ ಟಿಕೆಟ್ (TICKET) ನೀಡಿರುವುದರಿಂದ ಬಂಡಾಯವಾಗಿ ಕಣಕ್ಕಿಳಿಯುತ್ತಿದ್ದೇನೆ. ಈ ಚುನಾವಣೆಯಲ್ಲಿ ಮಾಯಕೊಂಡದ ಜನತೆ ಆಶೀರ್ವಾದ ಮಾಡುತ್ತಾರೆ ಎಂಬ ಭರವಸೆ ಇದೆ. ಬಸವರಾಜ್ ನಾಯ್ಕ್ ಮಾಯಕೊಂಡದಲ್ಲಿ ಈ ಹಿಂದೆ ಶಾಸಕರಾಗಿದ್ದಾಗ ಏನು ಕೆಲಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿ, ಬಿಜೆಪಿ (BJP) ಮುಖಂಡರು, ಕಾರ್ಯಕರ್ತರು ನನ್ನ ಜೊತೆಗಿದ್ದು, ಗೆದ್ದೇ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಎಸ್ಸಿ ಮೀಸಲು ಕ್ಷೇತ್ರವಾಗಿರುವ ಮಾಯಕೊಂಡದಲ್ಲಿ ಈಗಾಗಲೇ ನಾನು ಸಂಚಾರ ಮಾಡಿದ್ದೇನೆ. ಜನರ ಸ್ಪಂದನೆ ಉತ್ತಮವಾಗಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಕ್ಷೇತ್ರದ ಜನರು ಆರಿಸಿ ಕಳುಹಿಸುತ್ತಾರೆ
ಎಂಬ ನಂಬಿಕೆ ಇದೆ. ಕ್ಷೇತ್ರದ ಜನರೇನೂ ದಡ್ಡರಲ್ಲ. ಬಸವರಾಜ್ ನಾಯ್ಕ್ ಅವರಿಗೆ ಮಾಯಕೊಂಡದಲ್ಲಿ ಉತ್ತಮ ಹೆಸರಿಲ್ಲ. ಹಾಗಾಗಿ, ಎಲ್ಲಾ ಆಕಾಂಕ್ಷಿಗಳು ಸೇರಿಕೊಂಡು ನನ್ನನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಎಲ್ಲರ
ಸಹಕಾರ, ಆಶೀರ್ವಾದ ನನ್ನ ಮೇಲಿದೆ. ಈ ಹಿಂದೆ ಶಾಸಕರಾಗಿದ್ದವರು ಯಾವೆಲ್ಲಾ ಕೆಲಸ ಮಾಡಿದ್ದಾರೆ, ಅಭಿವೃದ್ಧಿ ಎಷ್ಟಾಗಿದೆ ಎಂಬುದು ಜನರಿಗೆ ಗೊತ್ತಿದೆ. ಜನರೂ ಬೇಸತ್ತಿದ್ದಾರೆ. ಈ ಕಾರಣಕ್ಕೆ ಹೊಸ ಮುಖಕ್ಕೆ ಅವಕಾಶ ನೀಡಲಿದ್ದಾರೆ
ಎಂದು ಅಭಿಪ್ರಾಯಪಟ್ಟರು.
ಹೊಸಬರಿಗೆ ಈ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಪಕ್ಷದ ಮುಖಂಡರು ಹೇಳಿದ್ದರಾದರೂ ಅದು ಸುಳ್ಳಾಗಿದೆ. ನಾಮಪತ್ರ ಸಲ್ಲಿಸದಂತೆ ಒತ್ತಡ ಬಂದಿದ್ದರೂ ಇದಕ್ಕೆಲ್ಲಾ ತಲೆಕೆಡಿಸಿಕೊಂಡಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ
ಕಣಕ್ಕಿಳಿಯುತ್ತಿದ್ದೇನೆ. ನಾವೆಲ್ಲರೂ ಎಂಟು ಆಕಾಂಕ್ಷಿಗಳ ಪೈಕಿ ಒಬ್ಬರಿಗೆ ನೀಡಿದರೆ ಗೆಲ್ಲಿಸಿಕೊಂಡು ಬರುತ್ತೇವೆಂದು ಜಿಲ್ಲಾ ಮುಖಂಡರು ಹಾಗೂ ರಾಜ್ಯ, ಕೇಂದ್ರದ ನಾಯಕರಿಗೂ ತಿಳಿಸಿದ್ದರೂ ಕ್ಯಾರೇ ಎಂದಿಲ್ಲ. ಯಾರದ್ದೋ
ಒತ್ತಡಕ್ಕೆ ಒಳಗಾಗಿ ಬಸವರಾಜ್ ನಾಯ್ಕ್ ರಿಗೆ ಟಿಕೆಟ್ ಕೊಡಲಾಗಿದೆ. ನಾನು ಮೂಲತಃ ಬಿಜೆಪಿ ಪಕ್ಷದವನು. ನನಗೆ ಪಕ್ಷ ಮುಖ್ಯ. ಹೊರಗಿನವರು ಯಾರು? ಒಳಗಿನವರು ಯಾರು? ಎಂಬುದು ಮಾಯಕೊಂಡ ಜನರಿಗೆ ಗೊತ್ತಿದೆ ಎಂದು
ಹೇಳಿದರು.
ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಂಜಾ ನಾಯ್ಕ್, ಮುಖಂಡರಾದ ಆಲೂರು ನಿಂಗರಾಜ್, ಬಸವರಾಜ್ ನಾಯ್ಕ್ ಮತ್ತಿತರರು ಹಾಜರಿದ್ದರು.