ಕಲಬುರಗಿ: ಬಿಜೆಪಿ 2018 ರಿಂದ ಅಧಿಕಾರದಲ್ಲಿದ್ದು, ಅವರು ನೀಡಿದ್ದ 600 ಭರವಸೆಗಳಲ್ಲಿ 10% ಭರವಸೆಗಳನ್ನು ಕೂಡ ಈಡೇರಿಸಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ಪ್ರಹಾರ ನಡೆಸಿದ್ದಾರೆ.
ನೂತನವಾಗಿ ಘೋಷಣೆಯಾಗಿರುವ ಯಡ್ರಾಮಿ ತಾಲ್ಲೂಕಿನಲ್ಲಿ, ಜೇವರ್ಗಿ ಮತಕ್ಷೇತ್ರದಲ್ಲಿ ₹867.49 ಕೋಟಿ ವೆಚ್ಚದ 87 ಕಾಮಗಾರಿಗಳ ಶಂಕುಸ್ಥಾಪನೆ, ₹38.29 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮಾಡಲಾಗಿದೆ. ಒಟ್ಟಾರೆ 906 ಕೋಟಿ ರೂ.ಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ವಿರೋಧಪಕ್ಷದವರು ರಾಜಕಾರಣಕ್ಕಾಗಿ ಸುಳ್ಳನ್ನೇ ಅವಲಂಬಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಮೂಲಸೌಕರ್ಯ ಕಾಮಗಾರಿಗಳಿಗೆ ಸರ್ಕಾರದಲ್ಲಿ ಅನುದಾನವಿಲ್ಲ ಎಂದು ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿದ್ದರೆ ಜೇವರ್ಗಿ ಮತಕ್ಷೇತ್ರ ಒಂದರಲ್ಲಿ ₹906 ಕೋಟಿ ವೆಚ್ಚ ಮಾಡಲಾಗುತ್ತಿರಲಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಗಾಗಿ 1 ಲಕ್ಷದ 12 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ವೆಚ್ಚ ಮಾಡಲಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಯಂತೆ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಾವು ಸರ್ಕಾರ ನುಡಿದಂತೆ ನಡೆಯುವವರು ಎಂದರು.
ಈ ಚುನಾವಣೆಯಲ್ಲಿ ನಮ್ಮ ಪಕ್ಷದ ವತಿಯಿಂದ 592 ಭರವಸೆಗಳನ್ನು ನೀಡಲಾಗಿತ್ತು. 243 ಭರವಸೆಗಳನ್ನು ಈಡೇರಿಸಲಾಗಿದೆ. ಉಳಿದ ಅವಧಿಯಲ್ಲಿ ಮಿಕ್ಕ ಭರವಸೆಗಳನ್ನು ಈಡೇರಿಸಲಾಗುವುದು. ಬಿಜೆಪಿ 2018 ರಿಂದ ಅಧಿಕಾರದಲ್ಲಿದ್ದು, ಅವರು ನೀಡಿದ್ದ 600 ಭರವಸೆಗಳಲ್ಲಿ 10% ಭರವಸೆಗಳನ್ನು ಕೂಡ ಈಡೇರಿಸಿರಲಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ 63 ಹೊಸ ತಾಲೂಕುಗಳನ್ನು ಘೋಷಣೆ ಮಾಡಲಾಗಿತ್ತು. ಬಿಜೆಪಿಯವರು 2018 ರಿಂದ 2023 ರವರೆಗೆ ನೂತನ ತಾಲ್ಲೂಕುಗಳಲ್ಲಿ ಕೇವಲ 14 ಕಡೆ ಮಾತ್ರ ತಾಲ್ಲೂಕು ಆಡಳಿತ ಕಚೇರಿ ನಿರ್ಮಾಣ ಮಾಡಿದ್ದರು. 2023ರಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ 49 ತಾಲ್ಲೂಕುಗಳಲ್ಲಿ ಕೂಡ ಪ್ರಜಾಸೌಧಗಳನ್ನು ಮಂಜೂರು ಮಾಡಿದ್ದು, ನಿರ್ಮಾಣ ಮಾಡಲಾಗುತ್ತಿದೆ ಎಂದರು.
ನಮ್ಮ ಸರ್ಕಾರದಲ್ಲಿ 17 ತಾಲ್ಲೂಕುಗಳು ಮಂಜೂರಾಗಿದ್ದು, 97 ನಾಡ ಕಚೇರಿಗಳು ಮಂಜೂರಾಗಿವೆ. ಕಲ್ಯಾಣ ಕರ್ನಾಟಕದಲ್ಲಿ 39 ಕಚೇರಿಗಳನ್ನು ಮಂಜೂರು ಮಾಡಲಾಗಿದೆ. ಎರಡನೇ ಹಂತದಲ್ಲಿ 53 ನಿರ್ಮಾಣವಾಗಿವೆ. ಕಲ್ಯಾಣ ಕರ್ನಾಟಕದ 25 ತಾಲ್ಲೂಕುಗಳಲ್ಲಿ ನಾಡ ಕಚೇರಿಗಳನ್ನು ನಮ್ಮ ಸರ್ಕಾರ ಮಂಜೂರು ಮಾಡಿದೆ ಎಂದರು.
ಈ ಬಾರಿ ಮಳೆ ಹೆಚ್ಚಾಗಿ ಬೆಳೆ ಹಾನಿಯಾಗಿರುವುದರಿಂದ ವೈಮಾನಿಕ ಸಮೀಕ್ಷೆ ಕೈಗೊಂಡು ಪರಿಶೀಲಿಸಿ ಪರಿಹಾರ ಕೊಡಲು ನಿರ್ಧರಿಸಿ ಎಸ್ ಡಿ.ಆರ್.ಎಫ್ ನಿಂದ 1,218 ಕೋಟಿ ಜೊತೆಗೆ ಸರ್ಕಾರದ ವತಿಯಿಂದ ಒಟ್ಟು 1,031ಕೋಟಿ ಹೆಚ್ಚುವರಿಯಾಗಿ ಒದಗಿಸಲಾಗಿದೆ. ರಾಜ್ಯದಲ್ಲಿ ಒಟ್ಟು 14.21 ಲಕ್ಷ ರೈತರ ಬೆಳೆ ಹಾನಿಯಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ 7,21,786 ರೈತರ ಬೆಳೆ ಹಾನಿಗೊಳಗಾಗಿದೆ. 1,072 ಕೋಟಿ ಬೆಳೆ ಹಾನಿಗೆ ಪರಿಹಾರ ನೀಡಿದೆ ಎಂದು ಮಾಹಿತಿ ನೀಡಿದರು.
ಕಲಬುರ್ಗಿ ಜಿಲ್ಲೆಯಲ್ಲಿ 3,23,318 ರೈತರ ಬೆಳೆ ಹಾನಿಯಾಗಿದ್ದು, ₹498 ಕೋಟಿ ಪರಿಹಾರ ನೀಡಲಾಗಿದೆ. ರೈತರ ಖಾತೆಗಳಿಗೆ ಈ ಹಣವನ್ನು ತಲುಪಿಸುವ ಕೆಲಸ ಮಾಡಿದ್ದೇವೆ. ರೈತರ ಸಹಾಯಕ್ಕೆ ಸರ್ಕಾರ ಸದಾ ಮುಂದಾಗಿದೆ ಎಂದರು.
ನೆಟೆ ರೋಗಕ್ಕೆ ತುತ್ತಾದ ತೊಗರಿ ಬೆಳೆಗೆ 233 ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಕಬ್ಬಿನ ಬೆಲೆ ಕಡಿಮೆ ಎಂದು ರೈತರು ಪ್ರತಿಭಟಿಸಿದಾಗ ಅವರ ನೆರವಿಗೆ ಸರ್ಕಾರ ಧಾವಿಸಿ ಸರ್ಕಾರದಿಂದ ₹50 ಹಾಗೂ ಕಾರ್ಖಾನೆಯಿಂದ 50 ರೂ. ನಿಗದಿ ಮಾಡಿ 300 ಕೋಟಿಗಳನ್ನು ಸರ್ಕಾರದಿಂದ ಕಬ್ಬಿನ ಬೆಳೆಗಾರರಿಗೆ ನೀಡಲಾಗಿದೆ ಎಂದು ತಿಳಸಿದರು.





Leave a comment