Site icon Kannada News-suddikshana

ಶಾಂತಿಸಾಗರ (ಸೂಳೆಕೆರೆ) ರಸ್ತೆಯಲ್ಲಿ ಬೈಕ್ ವ್ಲೀಲಿಂಗ್ ಮಾಡಿದ್ದ ಯುವಕನ ವಿರುದ್ಧ ಕೇಸ್!

SUDDIKSHANA KANNADA NEWS/ DAVANAGERE/ DATE:22-02-2025

ದಾವಣಗೆರೆ: ಚನ್ನಗಿರಿ (Channagiri) ತಾಲೂಕಿನ ಶಾಂತಿಸಾಗರ (ಸೂಳೆಕೆರೆ) ಸಿದ್ಧಪ್ಪ ದೇವಸ್ಥಾನದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕನ ವಿರುದ್ಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ.

ಚನ್ನಗಿರಿ ಪಟ್ಟಣದ ಬೈಕ್ ಸವಾರ ಜಮೀರ್ ಅಲಿಯಾಸ್ ಪಾಪಾ ಈತನೇ ಬೈಕ್ ವ್ಹೀಲಿಂಗ್ ಮಾಡಿದವನು.

ಕಳೆದ ಫೆಬ್ರವರಿ 11ರಂದು ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಗಿರಿ –ದಾವಣಗೆರೆ ರಸ್ತೆಯ ಶಾಂತಿಸಾಗರ ಬಳಿ ಇರುವ ಸಿದ್ದಪ್ಪ ದೇವಾಸ್ಥಾನದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ಬೈಕ್ ಸವಾರನು ತನ್ನ ಬೈಕಿನ ಹಿಂಬದಿಯಲ್ಲಿ ಇನ್ನೊಬ್ಬನನ್ನು ಕೂರಿಸಿಕೊಂಡು ಹೆಲ್ಮೆಟ್ ಧರಿಸದೇ, ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡುತ್ತಾ ಬೈಕ್ ನ ಮುಂದಿನ ಗಾಲಿಯನ್ನು ಹಾರಿಸಿಕೊಂಡು ಹಿಂಬದಿಯ ಒಂದೇ ಗಾಲಿಯಲ್ಲಿ ಚಾಲನೆ (ಬೈಕ್ ವ್ಹಿಲಿಂಗ್) ಮಾಡುತ್ತಾ ರಸ್ತೆಯಲ್ಲಿ ಸಂಚರಿಸುವ ವಿಡಿಯೋ ವೈರಲ್ ಆಗಿತ್ತು.

ಇತರೆ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ತೊಂದರೆಯುಂಟಾಗುವ ರೀತಿಯಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಪೋಟೋ, ವಿಡಿಯೋವನ್ನು ಪರಿಶೀಲನೆ ಮಾಡಿದಾಗ ಸದರಿ ಬೈಕ್ ಸವಾರ ಜಮೀರ್ ಅಲಿಯಾಸ್ ಪಾಪಾ ಎಂದು ಗೊತ್ತಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಆಗುವಂತೆ ಬೈಕ್ ಸವಾರಿ ಮಾಡುತ್ತಿದ್ದ ಜಮೀರ್ @ ಪಾಪಾನ ವಿರುದ್ಧ ಬಸವಾ ಪಟ್ಟಣ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ನಂ 22/2025 ರಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಯುವಜನತೆಗೆ ಸೂಚನೆ:

ಜಿಲ್ಲೆಯ ಕೆಲವು ಕಡೆ ಹುಚ್ಚು ಕ್ರೇಜ್ ಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹಾಕಲು ಸಂಚಾರ ನಿಯಮಗಳ ಉಲ್ಲಂಘನೆ ಮಾಡಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದೆರೆಯುಂಟಾಗುವ ರೀತಿಯಲ್ಲಿ ಹಾಗೂ ತಮ್ಮ ಜೀವಕ್ಕೆ ಹಾನಿಯಾಗುವಂತೆ ವಾಹನ ಚಾಲನೆ ಮಾಡುವಂತ ಯುವಕರು ಕಂಡುಬಂದಿದೆ.

ಅತಿವೇಗವಾಗಿ, ಹೆಲ್ಮೇಟ್ ಧರಿಸದೇ, ಚಾಲನ ಪರವಾನಿಗೆ ಇಲ್ಲದೇ, ಸಂಚಾರ ನಿಯಮಗಳನ್ನು ಪಾಲನೆ ಮಾಡದೇ ಸಂಚರಿಸುವ ಬೈಕ್ ಸವಾರರಿಗೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

Exit mobile version