SUDDIKSHANA KANNADA NEWS/DAVANAGERE/DATE:29_12_2025
ದಾವಣಗೆರೆ: ದಾವಣಗೆರೆಯಲ್ಲಿ ಡ್ರಗ್ಸ್ ಮಾಫಿಯಾ ಹೆಡೆಮುರಿ ಕಟ್ಟಲು ಸಮರ ಸಾರಿರುವ ಪೊಲೀಸರು ಕಾಂಗ್ರೆಸ್ ಘಟಾನುಘಟಿಗಳನ್ನು ಬಂಧಿಸಿದ್ದಾರೆ. ಮಾದಕ ವಸ್ತು ಮಾರಾಟ ಮತ್ತು ಸೇವನೆ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ ಈ ಹಿಂದೆ ನಾಲ್ವರನ್ನು ಬಂಧಿಸಿದ್ದ ವಿದ್ಯಾನಗರ ಪೊಲೀಸರು ಇನ್ನೂ ನಾಲ್ವರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 8ಕ್ಕೆ ಏರಿದೆ.
ಈ ಸುದ್ದಿಯನ್ನೂ ಓದಿ: “ನೀವು ಕೆಟ್ಟದಾಗಿ ವರ್ತಿಸಿದ್ದೀರಿ”: ದಿಗ್ವಿಜಯ ಸಿಂಗ್ ಗೆ ರಾಹುಲ್ ಗಾಂಧಿ ತರಾಟೆ!
ವಸತಿ ಸಚಿವ ಜಮೀರ್ ಅಹ್ಮದ್ ಆಪ್ತ ಅನ್ವರ್ ಬಾಷಾ, ಪಾರಸ್, ಕಷ್ಣಮೂರ್ತಿ, ಧೋನಿ ಅಲಿಯಾಸ್ ಮಂಜುನಾಥ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಈಗಾಗಲೇ ಕಾಂಗ್ರೆಸ್ ಮುಖಂಡ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಶಾಮನೂರು ವೇದಮೂರ್ತಿ, ರಾಮ್ ಸ್ವರೂಪ್, ಧೋಲಾರಾಮ್, ದೇವಕಿಶನ್ ಬಂಧಿಸಲಾಗಿತ್ತು.
ಶಾಮನೂರು ವೇದಮೂರ್ತಿ ಡ್ರಗ್ಸ್ ಗ್ಯಾಂಗ್ ನಲ್ಲಿ ಈ ನಾಲ್ವರು ಇದ್ದದ್ದು ಗೊತ್ತಾಗಿದೆ. ಶಾಮನೂರು ವೇದಮೂರ್ತಿ ಬಂಧನದ ವೇಳೆ ಈ ನಾಲ್ವರು ಪರಾರಿಯಾಗಿದ್ದರು. ವಿದ್ಯಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಈ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್ ನಾಯಕರ ಅಮಲು ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಶಾಮನೂರು ವೇದಮೂರ್ತಿ, ರಾಮ್ ಸ್ವರೂಪ್, ಧೋಲಾರಾಮ್, ದೇವಕಿಶನ್ ಬಂಧಿಸಲಾಗಿತ್ತು. ಈ ವೇಳೆ ರಾಜಸ್ತಾನದಿಂದ ಡ್ರಗ್ಸ್ ಅನ್ನು ದಾವಣಗೆರೆಗೆ ತಂದು ಮಾರಾಟ ಮಾಡಲಾಗುತಿತ್ತು ಎಂಬ ಅಂಶ ಬೆಳಕಿಗೆ ಬಂದಿತ್ತು. ಶ್ರೀಮಂತರನ್ನೇ ಟಾರ್ಗೆಟ್ ಮಾಡಿಕೊಂಡು, ಹೆಚ್ಚು ಹಣ ಕೊಟ್ಟು ಮಾದಕ ವಸ್ತುಗಳನ್ನು ಖರೀದಿಸುವ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಈ ಮೂಲಕ ಹೆಚ್ಚಿನ ಹಣ ಸಂಪಾದನೆಗೆ ಮುಂದಾಗಿದ್ದರು.
ಪೊಲೀಸರ ವಿಚಾರಣೇ ವೇಳೆ ರಾಜಸ್ತಾನ ಪೆಡ್ಲರ್ ಗಳಿಂದ ಪ್ರತಿ ಗ್ರಾಂ ಮಾದಕ ವಸ್ತುವಿಗೆ ರೂ. 3500 ರೂಪಾಯಿಯಿಂದ 4 ಸಾವಿರ ರೂಪಾಯಿಗೆ ವೇದಮೂರ್ತಿ ಮತ್ತು ದೇವಕಿಶನ್ ಖರೀದಿ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಜೊತೆಗೆ ಈ ಆರೋಪಿಗಳು ಹೆಚ್ಚು ಹಣ ಕೊಟ್ಟು ಖರೀದಿಸುವ ಶ್ರೀಮಂತರು ಮತ್ತು ಉದ್ಯಮಿಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ದಾವಣಗೆರೆ ಜಿಲ್ಲೆಯಲ್ಲಿ ಮಾದಕವಸ್ತುಗಳ ವಿರುದ್ದ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಅಕ್ರಮ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುವವರ ಹೆಡೆಮುರಿ ಕಟ್ಟುತ್ತಿದ್ದಾರೆ. ಮಾದಕ ವಸ್ತು ನಿಗ್ರಹ ಪಡೆ ರಚನೆಯಾದ ಬಳಿಕ ಎಂಟು ಪ್ರಕರಣಗಳನ್ನು ದಾಖಲಿಸಿ ಒಟ್ಟು 24 ಆರೋಪಿಗಳನ್ನು ಬಂಧಿಸಿದ್ದಾರೆ. ಹರಿಹರ, ಹೊನ್ನಾಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇಂಥ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಪೊಲೀಸ್ ಇಲಾಖೆಯು ಪಣ ತೊಟ್ಟಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೂ ಸಹ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಜಾಲದಲ್ಲಿ ಸಕ್ರಿಯರಾಗಿರುವವರ ಪತ್ತೆಗೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಯಾರೇ ಅಕ್ರಮ ಮಾದಕ ವಸ್ತುಗಳ ಮಾರಾಟದಲ್ಲಿ ಕಂಡು ಬಂದಿದ್ದೇ ಆದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.






Leave a comment