Site icon Kannada News-suddikshana

ಭದ್ರಾಡ್ಯಾಂ (Bhadra Dam) ನೀರು ಹರಿಸುವಿಕೆಗೆ ಆಗ್ರಹಿಸಿ ಹೆದ್ದಾರಿ ತಡೆ ವೇಳೆ ಸಂಧಾನ, ಸಂಜೆ ಸಭೆಯಲ್ಲಿ ರೈತ ಮುಖಂಡರ ಅಸಮಾಧಾನ… ಡಿಸಿ, ಎಸ್ಪಿ ಯತ್ನ ವಿಫಲ.. ಬೆಣ್ಣೆನಗರಿಯಲ್ಲಿ ಮತ್ತೆ ಶುರುವಾಗಲಿದೆ ಹೋರಾಟ…!

DAVANAGERE DC MEETING FAIL

DAVANAGERE DC MEETING FAIL

SUDDIKSHANA KANNADA NEWS/ DAVANAGERE/ DATE:21-09-2023

ದಾವಣಗೆರೆ: ಭದ್ರಾ ಜಲಾಶಯ(Bhadra Dam)ದ ಬಲದಂಡೆ ನಾಲೆಯಲ್ಲಿ ನೀರು ಹರಿಸುವಿಕೆ ಮುಂದುವರಿಸಲೇಬೇಕೆಂಬ ಪಟ್ಟು ಹಿಡಿದಿರುವ ದಾವಣಗೆರೆ ಜಿಲ್ಲೆಯ ರೈತ ಮುಖಂಡರು, ರೈತರು ಈ ಬೇಡಿಕೆಯಿಂದ ಹಿಂದೆ ಸರಿಯುವ ಲಕ್ಷಣ ಗೋಚರಿಸುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ತಡೆ ವೇಳೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

HEDDARI PROTEST DAVANAGERE

ಆದ್ರೆ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾರತೀಯ ರೈತ ಒಕ್ಕೂಟದ ಮುಖಂಡರು, ರೈತ ಮುಖಂಡರು, ರೈತರು ಪಾಲ್ಗೊಂಡಿದ್ದರು. ಆದ್ರೆ, ಸಭೆಯು ವಿಫಲವಾಗಿದ್ದು, ಸೆ.22ರಿಂದ ರೈತರು ಹೋರಾಟ ಮುಂದುವರಿಸಲಿದ್ದಾರೆ.

DAVANAGERE DC MEETING FAIL

ಭದ್ರಾ ನೀರು ಹರಿಸಲು ಜಿಲ್ಲಾಧಿಕಾರಿ ಅವರು ಕರೆದಿದ್ದ ಸಭೆ ವಿಫಲವಾಗಿದೆ. ರೈತರ ಹೋರಾಟ ಮುಂದುವರಿಯಲಿದೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ನಗರದ ಶ್ರೀ ಬೀರೇಶ್ವರ ದೇವಸ್ಥಾನದಿಂದ ಬೃಹತ್ ಟ್ರ್ಯಾಕ್ಟರ್ ಮೆರವಣಿಗೆ ನಡೆಯಲಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ರೈತರು ಭಾಗವಹಿಸಬೇಕು ಎಂದು ಕೊಳೇನಹಳ್ಳಿ ಬಿ ಎಂ ಸತೀಶ್, ಶಾಮನೂರು ಲಿಂಗರಾಜು, ಬೆಳವನೂರು ನಾಗೇಶ್ವರರಾವ್ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: 

ಭದ್ರಾ ಡ್ಯಾಂ( Bhadra Dam) ನಿಂದ ನಾಲೆಗಳಲ್ಲಿ ನೀರು ಹರಿಸಲೇಬೇಕು, ಇಲ್ಲದಿದ್ದರೆ ರೈತರ ಹಿತಕ್ಕಾಗಿ ಬೀದಿಗಿಳಿದು ಹೋರಾಟ ಮಾಡಲು ಸಿದ್ಧ: ಸಿಡಿದೆದ್ದ ಸಂಸದ ಸಿದ್ದೇಶ್ವರ…!

ಸಭೆಯಲ್ಲಿ ಏನಾಯ್ತು..?

ಭದ್ರಾ ಜಲಾಶಯ(Bhadra Dam)ದಿಂದ ಅಚ್ಚುಕಟ್ಟು ಪ್ರದೇಶದ ನೀರಾವರಿ ಬೆಳೆಗಳಿಗೆ ಮುಂಗಾರು ಹಂಗಾಮಿನಲ್ಲಿ ಬರಹಿನ್ನಲೆಯಲ್ಲಿ ಆನ್ ಅಂಡ್ ಆಫ್ ವ್ಯವಸ್ಥೆಯಲ್ಲಿ ಕಾಲುವೆಗಳಿಗೆ ನೀರು ಬಿಡಲಾಗುತ್ತಿದ್ದು ಇದರಿಂದ ತೊಂದರೆಯಾಗಿದೆ ಎಂದು ಪ್ರತಿಭಟನೆ ಮಾಡಿದ ರೈತರೊಂದಿಗೆ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಸುಧೀರ್ಘ ಸಭೆ ನಡೆಸಿದರು.

BHADRA DAM

ನುಡಿದಂತೆ ನಡೆಯಲಿ:

ನೀರಾವರಿ ನಿಗಮದಿಂದ ನೀಡಿದ ಸಲಹೆಯನ್ನಾಧರಿಸಿ ಈ ವರ್ಷದ ಮಳೆಗಾಲದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ. ಆದರೆ ಸೆಪ್ಟೆಂಬರ್ 6 ರಂದು ನಡೆದ ಕಾಡಾ ಸಭೆಯಲ್ಲಿ ಮಳೆ ಕೊರತೆಯಿಂದ ಭದ್ರಾ ಜಲಾಶಯ(Bhadra Dam)ದಲ್ಲಿನ ನೀರಿನ ಸಂಗ್ರಹದ ಕೊರತೆಯಿಂದ ಮುಂಗಾರು ಹಂಗಾಮಿನಲ್ಲಿ ಆನ್ ಅಂಡ್ ಆಫ್ ವ್ಯವಸ್ಥೆಯಲ್ಲಿ ಎಡ, ಬಲದಂಡೆ ಕಾಲುವೆಗಳಿಗೆ ನೀರು ಬಿಡಲು ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಿ ನೀರು ಬಿಡಲಾಗುತ್ತಿದ್ದು ಕಳೆದ ನಾಲ್ಕು ದಿನಗಳಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇದರಿಂದ ಭತ್ತದ ಬೆಳೆಯು ವಡೆಯ ಹಂತದಲ್ಲಿದ್ದರಿಂದ ಈ ಅವಧಿಯಲ್ಲಿ ನೀರು ಬಿಡಬೇಕಾಗಿರುವುದು ಮಹತ್ವವುಳ್ಳದ್ದಾಗಿದೆ ಎಂಬುದು ರೈತರ ಮನವಿ.

BHADRA DAM BRP

30 ಸಾವಿರ ರೂ. ವೆಚ್ಚ:

ಪ್ರತಿ ಎಕರೆಗೆ ಭತ್ತಾ ನಾಟಿಗೆ ಕನಿಷ್ಠ ರೂ.30 ಸಾವಿರ ವೆಚ್ಚ ಮಾಡಲಾಗಿದ್ದು ನೀರಾವರಿ ಇಲಾಖೆಯ ಸಲಹೆ ಮೇರೆಗೆ ಭತ್ತ ನಾಟಿ ಮಾಡಲಾಗಿದೆ. ಜಲಾಶಯದಲ್ಲಿ ಕುಡಿಯುವ, ಕೈಗಾರಿಕೆ ಉದ್ದೇಶ ಮತ್ತು ಡೆಡ್ ಸ್ಟೋರೇಜ್ ಹೊರತುಪಡಿಸಿ ನೀರಾವರಿಗೆ 22.89 ಟಿಎಂಸಿ ಲಭ್ಯವಿದ್ದು ಮುಂದಿನ 60 ದಿನಗಳಲ್ಲಿ ನಿರಂತರವಾಗಿ ನೀರು ಹರಿಸಿದರೆ, ಭತ್ತದ ಬೆಳೆ ರೈತರ ಕೈಗೆ ಸಿಗಲಿದೆ. ಭತ್ತದ ಬೆಳೆ ಬಾರದಿದ್ದಲ್ಲಿ ಆರ್ಥಿಕ ನಷ್ಟ ಮತ್ತು ಮೇವಿನ ಕೊರತೆಯಾಗಲಿದ್ದು ತಕ್ಷಣವೇ ಕಾಲುವೆಗಳಿಗೆ ನೀರು ಹರಿಸಬೇಕೆಂದು ದಾವಣಗೆರೆ, ಹರಿಹರ, ಮಲೆಬೆನ್ನೂರು ಭಾಗದ ರೈತರು ಆಗ್ರಹಿಸಿದರು.

ಕ್ಯೂಸೆಕ್ ಕಡಿಮೆ ಮಾಡಿ, ನೀರು ಹರಿಸಿ:

ಆನ್ ಅಂಡ್ ಆಫ್ ವ್ಯವಸ್ಥೆಯಡಿ ನೀರು ಬಿಡುವುದರಿಂದ ಜಲಾಶಯದಿಂದ ಕಾಲುವೆಗೆ ನೀರು ಹರಿಸಿದಾಗ ಕೊನೆಯ ಭಾಗದ ರೈತರಿಗೆ ಅದು ತಲುಪಲು ಕನಿಷ್ಠ 15 ದಿನಗಳು ಬೇಕಾಗುತ್ತದೆ. ಆದ್ದರಿಂದ ಈಗ ಕಾಲುವೆಗೆ 2600 ಕ್ಯೂಸೆಕ್ಸ್ ಹರಿಸಲಾಗುತ್ತಿತ್ತು ಇದನ್ನು ಕಡಿಮೆ ಮಾಡಿಯಾದರೂ ಪರವಾಗಿಲ್ಲ, ಕಾಲುವೆಗಳಿಗೆ ನಿರಂತರವಾಗಿ ಹರಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಈ ಹಿಂದೆ ಮಳೆ ಕೊರತೆಯಿಂದ ಜಲಾಶಯದಲ್ಲಿ ಕಡಿಮೆ ನೀರು ಸಂಗ್ರಹವಾದಾಗಲೂ ಸಹ ಮಳೆಗಾಲದಲ್ಲಿ ನೀರು ಹರಿಸಲಾಗಿತ್ತು. ಮುಂದಿನ ದಿನಗಳಲ್ಲಿ ಮಳೆಯಾಗುವ ಸಂಭವವಿದ್ದು ಭದ್ರಾ ಅಚ್ಚುಕಟ್ಟು ಪ್ರದೇಶದ ಸಲಹಾ ಸಮಿತಿ ತೀರ್ಮಾನವನ್ನು ಪುನರ್ ಪರಿಶೀಲಿಸಿ ನೀರು ಬಿಡುಗಡೆ ಮಾಡಲು ಎಲ್ಲಾ ರೈತರು ಮನವಿ ಮಾಡಿದರು.

ಈ ವೇಳೆ ಜಿಲ್ಲಾಧಿಕಾರಿ ಅವರು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಮಾತನಾಡಿ ವಸ್ತುಸ್ಥಿತಿಯಂತೆ ಪುನರ್ ಪರಿಶೀಲನೆ ನಡೆಸಿ ತುರ್ತಾಗಿ ರೈತರಿಗೆ ಅನುಕೂಲವಾಗಲು ಕಾಲುವೆಗಳಿಗೆ ನೀರು ಹರಿಸಲು ಸೂಕ್ತ ತೀರ್ಮಾನವನ್ನು ಕೈಗೊಳ್ಳಲು ತಿಳಿಸಿ ಮಾನ್ಯ ನೀರಾವರಿ ಸಚಿವರೊಂದಿಗೆ ಚರ್ಚಿಸಲಾಗುತ್ತದೆ ಎಂದು
ರೈತರಿಗೆ ಭರವಸೆ ನೀಡಿ ಸರ್ಕಾರಕ್ಕೆ ಎಲ್ಲಾ ಮಾಹಿತಿಯೊಂದಿಗೆ ವರದಿ ಕಳುಹಿಸಲಾಗುತ್ತದೆ ಎಂದರು.

ತೆರವಿಗೆ ಸೂಚನೆ:

ಅನಧಿಕೃತವಾಗಿ ಕಾಲುವೆಗಳಲ್ಲಿ ಪಂಪ್‍ಸೆಟ್ ಅಳವಡಿಸಿರುವ ಬಗ್ಗೆ ನೀರಾವರಿ ಇಲಾಖೆ, ಬೆಸ್ಕಾಂನಿಂದ ಪರಿಶೀಲನೆ ನಡೆಸಿ ಅನಧಿಕೃತವಾಗಿ ಪಂಪ್‍ಸೆಟ್ ಅಳವಡಿಸಿಕೊಂಡಿದ್ದಲ್ಲಿ ತೆರವಿಗೆ ಕ್ರಮ ಕೈಗೊಳ್ಳಲು ಬೆಸ್ಕಾಂ ಮತ್ತು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಲೋಕೇಶ್ ಪಿ.ಎನ್, ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಎನ್.ಸುಜಾತ ಹಾಗೂ ಇನ್ನಿತರೆ ಅಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

 

Exit mobile version