SUDDIKSHANA KANNADA NEWS/ DAVANAGERE/DATE:16_08_2025
ದಾವಣಗೆರೆ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕುರ್ಕಿ ಬಳಿ ಹಾದು ಹೋಗಿರುವ ಭದ್ರಾ ಮುಖ್ಯ ನಾಲೆಯ ಸೇತುವೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಕುಸಿದು ಬಿದ್ದಿರುವ ಘಟನಾ ಸ್ಥಳಕ್ಕೆ ಶನಿವಾರ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
READ ALSO THIS STORY: EXCLUSIVE: ಶಿವಪ್ಪನಾಯಕ ವೃತ್ತದಲ್ಲಿ ಶಾರ್ಟ್ ಸರ್ಕ್ಯೂಟ್: ಹೊತ್ತಿ ಉರಿದ ಗುಜರಿ ಅಂಗಡಿ, ಚಾರ್ಜರ್, ಬಲ್ಬ್ ಗಳು ಢಮಾರ್!
ಗುರುವಾರ ಸೇತುವೆ ಕುಸಿದು ಬಿದ್ದ ಸಂದರ್ಭದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಮುಂಗಾರು ಅಧಿವೇಶನದಲ್ಲಿ ಭಾಗವಹಿಸಿದ್ದರಿಂದ ಘಟನಾ ಸ್ಥಳಕ್ಕೆ ಭೇಟಿ ನೀಡಲು ಆಗಿರಲಿಲ್ಲ. ಇಂದು ಇಂಜಿನಿಯರ್ ಗಳ ಜೊತೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, 3.50 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆದಿದ್ದು, ಮಳೆಗಾಲ ಮುಗಿಯವರೆಗೆ ತಾತ್ಕಾಲಿಕವಾಗಿ ತುರ್ತು ದುರಸ್ತಿಗೊಳಿಸಿ ನೀರು ಪೋಲಾಗದಂತೆ ತಡೆಯಬೇಕು ಎಂದು ಇಂಜಿನಿಯರ್ ಗೆ ಸೂಚನೆ ನೀಡಿದರು.
ಸುಮಾರು 69 ವರ್ಷಗಳಿಂದ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಮಾಯಕೊಂಡ ಕ್ಷೇತ್ರದ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಸೇತುವೆಗಳು, ಕಾಲುವೆಗಳು ಶಿಥಿಲಗೊಂಡಿದ್ದು, ಈ ಬಗ್ಗೆ ಹಿಂದಿನ ಅಧಿವೇಶನಗಳಲ್ಲಿ ಸೇತುವೆಗಳು, ಕಾಲುವೆಗಳನ್ನು ಹೊಸದಾಗಿ ನಿರ್ಮಾಣ ಮಾಡುವಂತೆ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರು ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಶಿಥಿಲಗೊಂಡ ಕಾಲುವೆ, ಸೇತುವೆಗಳನ್ನು ನಿರ್ಮಾಣ ಮಾಡಲು ಕ್ರಮ ತೆಗೆದುಕೊಂಡಿದ್ದು, ಮುಂದಿನ ಬೇಸಿಗೆ ಕಾಲದಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದರು.
ಈಗಾಗಲೇ ರೈತರು ಭತ್ತದ ನಾಟಿಯಲ್ಲಿ ತೊಡಗಿದ್ದು, ಈ ಸಂದರ್ಭದಲ್ಲಿ ರೈತರಿಗೆ ನೀರಿನ ತೊಂದರೆ ಆಗಬಾರದು. ಕೂಡಲೇ ಕುಸಿದು ಬಿದ್ದ ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ರೈತರಿಗೆ ನೆರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಎಇಇ ವಿಕಾಸ್, ನೀರಾವರಿ ಇಲಾಖೆ ಎಂಜಿನಿಯರ್ ಮನೋಜ್, ಪರಮೇಶ್ವರಪ್ಪ, ಮುಖಂಡರಾದ ಗ್ರಾ ಪಂ ಸದಸ್ಯ ನಂದೀಶ್, ಕೃಷ್ಣಮೂರ್ತಿ, ನಟರಾಜ್, ಜಿಲ್ಲಾ ಹಿರಿಯ ಕಾಂಗ್ರೆಸ್ ಉಪಾಧ್ಯಕ್ಷ ಡಿ ತಿಪ್ಪಣ್ಣ,ರೈತ ಮುಖಂಡರುಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.