ದಾವಣಗೆರೆ: ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಿಗೆ ಪಡೆದ ದಸ್ತು ಪತ್ರ ಬರಹಗಾರರ ಒಕ್ಕೂಟದಿಂದ ಚೇತನ ಹೋಟೆಲ್ ನಲ್ಲಿ ರಾಜ್ಯ ಪತ್ರ ಬರಹಗಾರರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ನಡೆದ ಸಭೆಯಲ್ಲಿ ಡಿ. 16ರಂದು ಬೆಳಗಾವಿ ಚಲೋ ಸೇರಿ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ರಾಜ್ಯ ಪತ್ರ ಬರಹಗಾರರ ಅಸ್ತಿತ್ವಕ್ಕಾಗಿ ಹಾಗೂ ರಾಜ್ಯದ ಎಲ್ಲಾ ಪತ್ರ ಬರಹಗಾರರಿಗೆ ಡೀಡ್ ರೈಟರ್ ಲಾಗಿನ್ ಹಾಗೂ ಎಲ್ಲಾ ನೋಂದಣಿ ದಾಸ್ತಾವೇಜುಗಳಿಗೆ ಬಿ ಕಾಲಂ ಕಡ್ಡಾಯಗೊಳಿಸುವಂತೆ ಕಳೆದ ವರ್ಷದಿಂದ ಸಂಬಂಧ ಪಟ್ಟ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಚಿವರುಗಳಿಗೆ ಮನವಿ ಸಲ್ಲಿಸಿದ್ದರು ಸಹ ಇದುವರೆಗೂ ಯಾವುದೇ ಬೇಡಿಕೆ ಈಡೇರಿಸದೇ ಇರುವುದನ್ನು ಸಭೆಯಲ್ಲಿ ಖಂಡಿಸಲಾಯಿತು.
ಕಾವೇರಿ 1.0 ಮತ್ತು ಕಾವೇರಿ 2.0 ಇಂದ ಇನ್ನು ಮುಂದುವರೆದು ಕಾವೇರಿ 3.0 ನೋಂದಣಿ ಕಾರ್ಯಕ್ಕೆ ಮುಂದಾಗಿದ್ದು ಇದರಿಂದ ಸಾರ್ವಜನಿಕರ ನೋಂದಣಿ ಆಸ್ತಿಗಳಿಗೆ ಭದ್ರತೆ ಕಡಿಮೆಯಾಗುತ್ತದೆ. ಪತ್ರ ಬರಹಗಾರರಿಗೆ ಇನ್ನಿಲ್ಲದ ಸಮಸ್ಯೆ ಉಂಟಾಗುತ್ತದೆ ಈ ಬಗ್ಗೆ ಸರ್ಕಾರ ಯಾವುದೇ ಕೈಪಿಡಿ ಹೊರಡಿಸದೆ ಏಕ ಪಕ್ಷೀಯ ನಿರ್ಧಾರ ಮತ್ತು ಬದಲಾವಣೆಗಳನ್ನು ತರುತ್ತಿದೆ ಎಂದು ಸಭೆಯಲ್ಲಿ ಆಕ್ಷೇಪಿಸಲಾಯಿತು.
ಸರ್ಕಾರದ ಧೋರಣೆ ಖಂಡಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 16ರಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಧರಣಿ ಕೂರುವುದು ಇದಕ್ಕೂ ಸರ್ಕಾರ ಸ್ಪಂದಿಸದೆ ಇದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದು, ರಾಜ್ಯದ್ಯಂತ ಎಲ್ಲ ಉಪನೋಂದಣಿ ಕಚೇರಿಗಳಲ್ಲಿ ಒಂದು ದಿವಸ ಲೇಖನಿ ಸ್ಥಗಿತ ಧರಣಿ ನಡೆಸುವ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಒಕ್ಕೂಟದ ಅಧ್ಯಕ್ಷ ಡಿ.ಕೆ ಸಂಗಮೇಶ್ ಎಲಿಗಾರ್ ವಹಿಸಿದ್ದರು. .ರಾಜ್ಯ ಒಕ್ಕೂಟದ ಉಪಾಧ್ಯಕ್ಷರಾದ ಎನ್. ನವೀನ್ ಕುಮಾರ್, ಬಸವರಾಜ್ ಪಿ. ಲಕ್ಷ್ಮೇಶ್ವರ, ಶಾಂತರಾಜ್ ಪಿ. ಪೋಳ್ ಹಾಗೂ ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ವಿ ಏಕಬೋಟೆ, ಖಜಾಂಚಿ ಡಿ.ಆರ್ ಗಿರಿರಾಜು, ಕೃಷ್ಣಮೂರ್ತಿ, ವಿನೋದ ಗೌಡ ಸಿ ಪಾಟೀಲ್, ರುಕ್ಮಿಣಿ ಛಲವಾದಿ, ಶಶಿಧರ್ ರಂಜಣಗಿ, ರಘುನಾಥ, ನಜೀರ್ ಅಹ್ಮದ್, ಫಕ್ರುದ್ದೀನ್ ಡಾಂಬಳೆ, ಎಂಎಸ್ ನರಸಿಂಹಮೂರ್ತಿ, ಕೇಶವಮೂರ್ತಿ, ವಿಶ್ವಾಸ ಸುಣಧೋಳಿ, ಜಯಕುಮಾರ್, ಗುರುನಾಥ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.





Leave a comment