Home ದಾವಣಗೆರೆ ರಾಜ್ಯದಲ್ಲಿ ‘ಟ್ಯಾಕ್ಸ್ ಟೆರರಿಸಂ’ ಶುರುವಾಗಿದೆ; ಸಿದ್ದರಾಮಯ್ಯ ದಾಖಲೆ ಸಾಲಗಾರ: ಬಸವರಾಜ ಬೊಮ್ಮಾಯಿ ವಾಗ್ದಾಳಿ
ದಾವಣಗೆರೆಬೆಂಗಳೂರುವಾಣಿಜ್ಯ

ರಾಜ್ಯದಲ್ಲಿ ‘ಟ್ಯಾಕ್ಸ್ ಟೆರರಿಸಂ’ ಶುರುವಾಗಿದೆ; ಸಿದ್ದರಾಮಯ್ಯ ದಾಖಲೆ ಸಾಲಗಾರ: ಬಸವರಾಜ ಬೊಮ್ಮಾಯಿ ವಾಗ್ದಾಳಿ

Share
ಸಿದ್ದರಾಮಯ್ಯ
Share

ದಾವಣಗೆರೆ: ರಾಜ್ಯದಲ್ಲಿ ಒಂದು ರೀತಿಯಲ್ಲಿ ಟ್ಯಾಕ್ಸ್ ಟೆರರಿಸಂ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲನೇ ಬಜೆಟ್‌ನಲ್ಲಿ ಅಬಕಾರಿ ತೆರಿಗೆ ಹೆಚ್ಚಳ ಮಾಡಿದ್ದರು. ನಂತರ ಹಾಲಿನ ದರ, ಎರಡು ಬಾರಿ ವಿದ್ಯುತ್ ದರ, ಸ್ಟಾಂಪ್ ಡ್ಯೂಟಿ ಮೋಟರ್ ವೆಹಿಕಲ್ ತೆರಿಗೆ ಹೆಚ್ಚಳ ಮಾಡಿದ್ದಾರೆ. ಮೂರು ವರ್ಷದಲ್ಲಿ 60 ಸಾವಿರ ಕೋಟಿ ರೂ. ಹೊಸ ತೆರಿಗೆ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದಲ್ಲಿ ಸುಮಾರು 5 ಲಕ್ಷ ಕೋಟಿ ಹೊಸ ಸಾಲ ಮಾಡಿ, ದಾಖಲೆ ಸಾಲಗಾರ ಸಿದ್ದರಾಮಯ್ಯ ಎಂದು ಹೆಸರು ಪಡೆದುಕೊಂಡಿದ್ದಾರೆ. ಎಲ್ಲ ಇಲಾಖೆಗಳಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು ಇಂತಹ ಭ್ರಷ್ಟ ಸರ್ಕಾರ ನೋಡಿರಲಿಲ್ಲ ಎಂದು ಆರೋಪಿಸಿದರು.

ಯಾವುದೇ ಹಳ್ಳಿಯಲ್ಲಿ ನೋಂದಣಿ ಮಾಡಬೇಕೆಂದರೆ ಲಂಚದ ಹಣ ಬೆಂಗಳೂರಿಗೆ ಮುಟ್ಟಬೇಕು. ಇಲ್ಲದಿದ್ದರೆ ನೋಂದಣಿ ಆಗುವುದಿಲ್ಲ. ದೂರದ ಹಳ್ಳಿಯಲ್ಲಿ ಒಂದು ಎಕರೆ ಚೇಂಜ್ ಆಫ್ ಲ್ಯಾಂಡ್‌ ಗೆ 10 ಲಕ್ಷ ರೂ. ನಿಗದಿ ಮಾಡಿದ್ದಾರೆ. ಇವರು ಕೊಡುವಂತಹ ಅಕ್ಕಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ರೇಷನ್ ಅಂಗಡಿಯವರೂ ದೂರು ದಾಖಲಿಸಿದ್ದಾರೆ. ಪ್ರತಿ ತಿಂಗಳು ಎಷ್ಟು ಕಡಿಮೆ ಅಕ್ಕಿ ಹಂಚಿಕೆ ಮಾಡುತ್ತೇವೆ ಅಷ್ಟು ರಾಜ್ಯ ಸರ್ಕಾರಕ್ಕೆ ಅನುಕೂಲ ಆಗುತ್ತದೆ ಎನ್ನುತ್ತಾರೆ. ಆಸ್ಪತ್ರೆಯಲ್ಲಿ, ಮಂತ್ರಿಗಳ ಕಚೇರಿ, ಸಿಎಂ ಕಚೇರಿಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ. ವರ್ಗಾವಣೆ ಉದ್ಯಮವಾಗಿ ಮಾರ್ಪಾಡಾಗಿದೆ ಎಂದು ದೂರಿದರು.

ಯಾವುದೇ ಅಧಿಕಾರಿ ಎಷ್ಟೇ ದುಡ್ಡು ಕೊಟ್ಟು ಬಂದರೂ ಎಷ್ಟು ದಿನ ಇರುತ್ತಾನೆ ಎನ್ನುವ ನಂಬಿಕೆ ಇಲ್ಲ. ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಜನರ ಮೇಲೆ ಭ್ರಷ್ಟಾಚಾರದ ಹೊರೆ ಹಾಕುತ್ತಾರೆ. ಒಂದು ಎಲೆಕ್ನಿಕ್ ಕಂಪನಿ 8000 ಎಲೆಕ್ನಿಕ್ ಮೀಟರ್‌ಗೆ ಚಾರ್ಜ್ ಮಾಡಿದರೆ ಅದರಲ್ಲಿ 6 ಸಾವಿರ ರೂ. ಭ್ರಷ್ಟಾಚಾರ ಇದೆ ಎಂದು ವಾಗ್ದಾಳಿ ನಡೆಸಿದರು.

ಅಧಃಪತನದ ಮೊದಲ ಹೆಜ್ಜೆ

ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಪಿಡಬ್ಲ್ಯುಡಿ, ಅಬಕಾರಿ, ಕೆಇಬಿ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುವ ಸಾಹಸ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಆದರೆ, ಮೂರು ವರ್ಷದಲ್ಲಿ ಸಿಎಂ ಅವರ ದುರಾಡಳಿತ ರಾಜ್ಯದ ಮನೆಮನೆಗೂ ತಲುಪಿದೆ. ದಾವಣಗೆರೆ, ಬಾಗಲಕೋಟೆಯ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ನ ಅಧಪತನದ ಮೊದಲನೆಯ ಹೆಜ್ಜೆಯಾಗುತ್ತದೆ. ಅದಕ್ಕೆ ದಾವಣಗೆರೆ ಬಾಗಲಕೋಟೆ ಜನ ಆಶೀರ್ವಾದ ಮಾಡುವ ವಿಶ್ವಾಸ ಇದೆ. ಬಿಜೆಪಿ ಒಗ್ಗಟಿನಿಂದ ಕೆಲಸ ಮಾಡಿ ಈ ದುಷ್ಟ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ನಾವು ವಿರಮಿಸುವುದಿಲ್ಲ. ಅದಕ್ಕಾಗಿ ಜನರು ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ನಕ್ಸಲ್ ಮುಕ್ತ ಭಾರತ

ದೇಶದಲ್ಲಿ ನಕ್ಸಲಿಸಂನ್ನು ಪರಿಣಾಮಕಾರಿಯಾಗಿ ಬೇರು ಸಮತವಾಗಿ ತೆಗೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಶ್ರಮದಿಂದ ರೆಡ್ ಕಾರಿಡಾರ ಅನ್ನುವುದು ಸಂಪುರ್ಣ ಅಳಿಸಿ ಹೋಗಿದೆ. ಇದಾಗಿರುವುದರಿಂದ ಕೆಲವೇ ಕೆಲವು ಜನರಿಗೆ ಸಂತೋಷ ಇಲ್ಲ. ಅಂತವರು ಇದರ ವಿರುದ್ಧ ಮಾತನಾಡುತ್ತಿದ್ದಾರೆ. ಅದಕ್ಕೆ ಮಹತ್ವ ಇಲ್ಲ. ಯಾಕೆಂದರೆ ಸುಮಾರು 4 ಸಾವಿರಕ್ಕಿಂತ ಹೆಚ್ಚು ನಕ್ಸಲರು ಶರಣಾಗಿದ್ದಾರೆ. ಛತ್ತೀಸಘಡ್, ಜಾರ್ಖಂಡ್ ಮಹಾರಾಷ್ಟ್ರ ಸೇರಿದಂತೆ ಎಲ್ಲ ಕಡೆಯೂ ನಕ್ಸಲರು ಶರಣಾಗಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಗೆ ವರದಿ ಕೊಟ್ಟಿದ್ದಾರೆ. ಇಡೀ ದೇಶದ ಜನರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಅಭಿನಂದಿಸುತ್ತಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *