Site icon Kannada News-suddikshana

ಸ್ಥಳದಲ್ಲೇ ನಿಂತು ಚರಂಡಿ ಹೂಳೆತ್ತಿಸಿದ ಶಾಸಕ ಬಸವಂತಪ್ಪ!

SUDDIKSHANA KANNADA NEWS/ DAVANAGERE/ DATE:06-04-2025

ದಾವಣಗೆರೆ: ಗ್ರಾಮದ ಚರಂಡಿಗಳಲ್ಲಿ ತುಂಬಿದ್ದ ತ್ಯಾಜ್ಯ, ಹೂಳೆತ್ತಿದ್ದು, ಭಾನುವಾರ ಶಾಸಕ ಕೆ.ಎಸ್.ಬಸವಂತಪ್ಪ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವತಃ ತಾವೇ ಮುಂದೆ ನಿಂತು ಚರಂಡಿಗಳಲ್ಲಿ ತುಂಬಿದ್ದ ಹೂಳು ತೆಗೆಸಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮಳಲಕೆರೆ ಗ್ರಾಮದ ವಿವಿಧ ರಸ್ತೆ ಬದಿ ನಿರ್ಮಿಸಲಾದ ಚರಂಡಿ ಕಾಮಗಾರಿ ಅಪೂರ್ಣ, ಕೆಲಸ ಮುಗಿದ ಚರಂಡಿಯಲ್ಲಿ ತುಂಬಿದ ತ್ಯಾಜ್ಯ, ಹೂಳು, ಚರಂಡಿ ಮೂಲಕ ಹರಿಯಬೇಕಿದ್ದ ಗೃಹ ಬಳಕೆ ಕೊಳಚೆ ನೀರು ರಸ್ತೆಗೆ ಬಂದರೆ, ಇನ್ನು ಕೆಲವೊಮ್ಮೆ ಸುರಿದ ಮಳೆ ನೀರು ಮನೆಯೊಳಗೆ ಎಲ್ಲೆಡೆ ಕಾಣುತ್ತಿರುವ ನೈರ್ಮಲ್ಯದ ಸಮಸ್ಯೆ ಕಂಡು ಹೂಳೆತ್ತಲು ಚಾಲನೆ ನೀಡಲಾಗಿತ್ತು.

ಈ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಕೆ.ಎಸ್.ಬಸವಂತಪ್ಪ, ತಾವೇ ಖುದ್ದು ಸ್ಥಳದಲ್ಲಿಯೇ ನಿಂತು ಚರಂಡಿಗಳಲ್ಲಿ ತುಂಬಿದ್ದ ತ್ಯಾಜ್ಯ, ಹೂಳು ತೆಗೆಸಿದರು.

ಗ್ರಾಮದಲ್ಲಿ ಅರ್ಧಮರ್ಧ ಕಾಮಗಾರಿಯಿಂದ ನಾನಾ ಸಮಸ್ಯೆ ಎದುರಿಸುವಂತಾಗಿತ್ತು. ಹಾಳಾದ ಚರಂಡಿಯಿಂದಾಗಿ ಮನೆ ಕೊಳಚೆ ಮತ್ತು ಮಳೆ ನೀರು ರಸ್ತೆಗೆ ಹರಿಯುತ್ತಿತ್ತು. ಅಲ್ಲದೇ ರಸ್ತೆಯ ಮೇಲೆ ಬಿದ್ದ ಗುಂಡಿಗಳಲ್ಲಿ ಹೊಲಸು ನೀರು ನಿಂತು ಗಬ್ಬು ನಾರುತ್ತಿದ್ದು, ಪ್ರದೇಶದ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿತ್ತು. ಈಗ ಚರಂಡಿಗಳಲ್ಲಿ ತುಂಬಿದ್ದ ಹೂಳೆತ್ತಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಗ್ರಾಮದ ಸ್ವಚ್ಛತೆಗೆ ಗ್ರಾಮಸ್ಥರು ಹೆಚ್ಚಿನ ಗಮನ ಹರಿಸಬೇಕು. ಚರಂಡಿಗಳು ತ್ಯಾಜ್ಯ, ಹೂಳು ತುಂಬದಂತೆ ಆಗಿದಾಂಗೆ ಸ್ವಚ್ಛಗೊಳಿಸಬೇಕು. ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮ ಸ್ವಚ್ಛವಾಗಿದ್ದರೆ ನಿಮ್ಮ ಆರೋಗ್ಯ ಸದೃಢವಾಗಿರುತ್ತದೆ ಎಂದು ಗ್ರಾಮಸ್ಥರಿಗೆ ಇದೇ ಸಂದರ್ಭದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಕಿವಿಮಾತು ಹೇಳಿದರು.

Exit mobile version