SUDDIKSHANA KANNADA NEWS/ DAVANAGERE/ DATE:06-05-2023
ದಾವಣಗೆರೆ (DAVANAGERE): ಜಗಳೂರು (JAGALURU) ವಿಧಾನಸಭಾ ಕ್ಷೇತ್ರದಲ್ಲಿ ದಿನಕಳೆದಂತೆ ರಾಜಕೀಯ ಆಟ ಮೇಲಾಟ ಜೋರಾಗುತ್ತಿದೆ. ಲಿಂಗಾಯತ ಸಮುದಾಯದ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಬಿ. ದೇವೇಂದ್ರಪ್ಪರ ಸಮ್ಮುಖದಲ್ಲಿ ಕೈ ಸೇರಿದ್ದು, ಕೇಸರಿಪಡೆಯಲ್ಲಿ ನಡುಕಂಪನ ಶುರುವಾಗಿದೆ. ಬಿಜೆಪಿ ಅಭ್ಯರ್ಥಿ ಎಸ್. ವಿ. ರಾಮಚಂದ್ರಪ್ಪರ ವಿರುದ್ಧ ಲಿಂಗಾಯತ ಸಮುದಾಯ ಮುನಿಸಿಕೊಂಡಿರುವುದು ಹಳೆಯ ವಿಚಾರ. ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಕೂಡಲ ಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ (PANCHAMASALI) ಸ್ವಾಮೀಜಿ ಶ್ರೀ ಜಯಮೃತ್ಯುಂಜಯ ಅವರು ದೇವೇಂದ್ರಪ್ಪರ ಮನೆಗೆ ಭೇಟಿ ನೀಡಿದ್ದಾರೆ.
ಜಯಮೃತ್ಯುಂಜಯ ಸ್ವಾಮೀಜಿಯವರು ಜಗಳೂರಿನ (JAGALURU) ದೇವೇಂದ್ರಪ್ಪ(DEVENDRAPPA)ರ ಮನೆಗೆ ಭೇಟಿ ನೀಡಿರುವುದು ಬಿಜೆಪಿ(BJP)ಗೆ ಸಖತ್ತಾಗಿಯೇ ಬಿಸಿ ಮುಟ್ಟಿಸಿದೆ. ಮಾತ್ರವಲ್ಲ, ಲಿಂಗಾಯತ ಸಮುದಾಯದವರು ಕಾಂಗ್ರೆಸ್ (CONGRESS)ನತ್ತ ವಾಲುತ್ತಿರುವುದು ತಲೆನೋವು ತಂದಿದೆ. ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಿರುವ ದೇವೇಂದ್ರಪ್ಪರು ಠಕ್ಕರ್ ಕೊಡಲಾರಂಭಿಸಿದ್ದಾರೆ. ಇದು ಹೊಸ ರಾಜಕೀಯ ಲೆಕ್ಕಾಚಾರಕ್ಕೂ ಕಾರಣವಾಗಿದೆ.
ಲಿಂಗಾಯತ ಸಮುದಾಯದ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆ ಎಚ್ಚೆತ್ತ ಎಸ್. ವಿ.ರಾಮಚಂದ್ರಪ್ಪರು ಸಂಸದ ಜಿ. ಎಂ. ಸಿದ್ದೇಶ್ವರ ಅವರನ್ನು ಜಗಳೂರಿಗೆ ಕರೆಸುವ ಮೂಲಕ ಲಿಂಗಾಯತ ಸಮುದಾಯದ ಮತಗಳು ಕಾಂಗ್ರೆಸ್ ಗೆ
ಹೋಗದಂತೆ ತಡೆಯುವ ಪ್ರಯತ್ನ ನಡೆಸಿದ್ದಾರೆ. ಈ ಬೆಳವಣಿಗೆ ನಡುವೆ ಜಯಮೃತ್ಯುಂಜಯ ಸ್ವಾಮೀಜಿ ಅವರು ದೇವೇಂದ್ರಪ್ಪರ ಮನೆಗೆ ಭೇಟಿ ನೀಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಒಂದೆಡೆ ಲಿಂಗಾಯತ ಮುಖಂಡರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು, ಮತ್ತೊಂದೆಡೆ ಪಂಚಮಸಾಲಿ ಸಮಾಜದ ಶ್ರೀಗಳು ಕಾಂಗ್ರೆಸ್ ಅಭ್ಯರ್ಥಿ ಮನೆಗೆ ಭೇಟಿ ನೀಡಿರುವುದು ನಾನಾ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಜಗಳೂರು ಕ್ಷೇತ್ರದಲ್ಲಿ ಮೊದಲಿನಿಂದಲೂ ಲಿಂಗಾಯತ ಸಮುದಾಯವೇ ನಿರ್ಣಾಯಕ. ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಗೆದ್ದರೂ ಆ ನಂತರ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಎಸ್ ವಿ ಆರ್ ಜಗಳೂರು (JAGALURU) ಕ್ಷೇತ್ರದ ಜನರು ಮುಜುಗರ ಪಟ್ಟುಕೊಳ್ಳುವಂತೆ ಮಾಡಿದ್ದರು. ಮತ್ತೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದರು. ಮತ್ತೆ ಬಿಜೆಪಿಗೆ ದ್ರೋಹ ಬಗೆದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರು ಕೆಜೆಪಿ ಪಕ್ಷ ಕಟ್ಟಿದಾಗ ಕೆಜೆಪಿಗೆ ಸೇರಿದ್ದರು. ಜಗಳೂರಿನಿಂದ ಕೆಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಕಾಂಗ್ರೆಸ್ ನ ಹೆಚ್. ಪಿ. ರಾಜೇಶ್ ಜಯಶಾಲಿಯಾಗಿದ್ದರು. ಮತ್ತೆ ಯಡಿಯೂರಪ್ಪರು ಬಿಜೆಪಿ ಸೇರಿದ್ದ ಕಾರಣಕ್ಕೆ ಬಿಜೆಪಿಗೆ ಬಂದ ಎಸ್. ವಿ. ರಾಮಚಂದ್ರಪ್ಪರು 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿ ಬಂದರು. ಬಿ. ಶ್ರೀರಾಮುಲು ಅವರನ್ನು ಬಿಜೆಪಿಯು ಉಪಮುಖ್ಯಮಂತ್ರಿಯಾಗಿ ಮಾಡುವುದಾಗಿ ಘೋಷಿಸಿ 2018ರಲ್ಲಿ ಚುನಾವಣೆ ಎದುರಿಸಿತ್ತು.
ತಮ್ಮ ಸಮುದಾಯದ ನಾಯಕನಿಗೆ ಉತ್ತಮ ಹುದ್ದೆ ಸಿಗುತ್ತೆ ಎಂಬ ಕಾರಣಕ್ಕೆ ವಾಲ್ಮೀಕಿ ಸಮುದಾಯವು ಬಿಜೆಪಿ ಬೆಂಬಲಿಸಿತ್ತು. ಯಡಿಯೂರಪ್ಪ ಅವರು ಸಿಎಂ ಆಗುತ್ತಾರೆ ಎಂಬ ಕಾರಣಕ್ಕೆ ಲಿಂಗಾಯತ ಸಮುದಾಯವೂ ಬಿಜೆಪಿ ಬೆಂಬಲಿಸಿತ್ತು. ಆದ್ರೆ, ಈ ಬಾರಿ ವಾತಾವರಣ ಬದಲಾಗಿದೆ. ಯಡಿಯೂರಪ್ಪರು ಮುಖ್ಯಮಂತ್ರಿಯಾಗಲ್ಲ, ರಾಮುಲು ಅವರು ಕಳೆದ ಚುನಾವಣೆಯಂತೆ ಎಲ್ಲಾ ಕಡೆ ಓಡಾಡಿ ಅಬ್ಬರಿಸಿ ಬೊಬ್ಬಿರಿಯುತ್ತಿಲ್ಲ. ಇದು ಸಹ ಬಿಜೆಪಿಗೆ ಹಿನ್ನೆಡೆ ತರುವ ಸಾಧ್ಯತೆ ಹೆಚ್ಚಿದೆ.
ಕ್ಷೇತ್ರದಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಿರುವುದಾಗಿ ಎಸ್ ವಿ ಆರ್ ಹೇಳಿಕೊಂಡು ಬರುತ್ತಿದ್ದರೂ, ಎಲ್ಲಾ ಕೆಲಸವೂ ಅರ್ಧಂಬರ್ಧ ಆಗಿದೆ. ಜೊತೆಗೆ ರಸ್ತೆಗಳು, ನೀರಾವರಿಗೆ ಸಂಬಂಧಿಸಿದ ಯೋಜನೆಗಳ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಸ್ಥಳೀಯರದ್ದು. ಇದು ಈ ಹಿಂದೆಯೂ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಮತ್ತೆ ಚುನಾವಣೆ ಬಂದಿದೆ. ಲಿಂಗಾಯತ ಸಮುದಾಯ ಬಿಜೆಪಿ ಜೊತೆ ಇದೆ ಭಾವಿಸಿದ್ದರೂ, ಒಳ ಹೊಡೆತವೇ ಈ ಬಾರಿ ಬೇರೆಯದ್ದೇ ಇದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಟಿಕೆಟ್ ಬಯಸಿದ್ದ ಹೆಚ್. ಪಿ. ರಾಜೇಶ್ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ದೇವೇಂದ್ರಪ್ಪರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ ಕಾರಣ ಮುನಿಸಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಎಸ್ ವಿ ಆರ್ ಅವರ ಭದ್ರಕೋಟೆಯಾಗಿದ್ದ ಕೆಲ ಗ್ರಾಮಗಳಲ್ಲಿ ಬಂಡಾಯದ ಬಿಸಿ ಎದುರಾಗಿದೆ. ಗೌರಿಪುರದಲ್ಲಿ ನಡೆದ ಹತ್ಯೆ ಪ್ರಕರಣ ಇದಕ್ಕೆ ಸಾಕ್ಷಿ. ಈ ವೇಳೆ ರಾಮಚಂದ್ರಪ್ಪರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಒಂದೆಡೆ ಲಿಂಗಾಯತ ಸಮುದಾಯದ ಮತಗಳು ಕೈ ತಪ್ಪುತ್ತಿರುವುದು, ಮತ್ತೊಂದೆಡೆ ವಿರೋಧದ ಬಿಸಿ ಎದುರಿಸುತ್ತಿರುವುದು ಬಿಜೆಪಿ ಅಭ್ಯರ್ಥಿಯಲ್ಲಿ ತಳಮಳಕ್ಕೆ ಕಾರಣವಾಗಿದೆ.
ಮತ್ತೆ ಎರಡು ಬಾರಿ ಬಿ. ಎಸ್. ಯಡಿಯೂರಪ್ಪರನ್ನು ಕ್ಷೇತ್ರಕ್ಕೆ ಕರೆಯಿಸಿ ಪ್ರಚಾರ ಮಾಡಬೇಕೆಂಬ ಹಂಬಲ ಹೊಂದಿರುವ ಎಸ್. ವಿ. ರಾಮಚಂದ್ರಪ್ಪರು ಲಿಂಗಾಯತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಯಡಿಯೂರಪ್ಪರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಾರಣಕ್ಕೆ ಇಡೀ ಸಮುದಾಯ ಈ ಬಾರಿ ಬಿಜೆಪಿ ಬೆಂಬಲಿಸುತ್ತಾರೆ ಎಂಬುದಿಲ್ಲ. ದೇವೇಂದ್ರಪ್ಪರು ನಾನಾ ರೀತಿಯ ತಂತ್ರಗಾರಿಕೆ ಹೂಡುತ್ತಿದ್ದು, ಪಂಚಮಸಾಲಿ ಸಮಾಜದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರು ದೇವೇಂದ್ರಪ್ಪರ ಮನೆಗೆ ಭೇಟಿ ನೀಡಿರುವುದರಿಂದ ಒಟ್ಟಾರೆ ಲಿಂಗಾಯತ ಸಮುದಾಯದ ಮತಗಳು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ರಣತಂತ್ರ ರೂಪಿಸಲಾಗಿದೆ. ಇದು ಯಶಸ್ವಿ ಆದರೆ ಕಾಂಗ್ರೆಸ್ ಗೆ ಪ್ಲಸ್ ಆಗುವುದು ಖಚಿತ. ಲಿಂಗಾಯತ ಸಮುದಾಯ, ವಾಲ್ಮೀಕಿ ಸಮುದಾಯ, ಎಸ್ಸಿ, ಎಸ್ಟಿ ಮತಗಳನ್ನು ದೇವೇಂದ್ರಪ್ಪರು ಸೆಳೆದರೆ ಗೆಲುವು ಕಷ್ಟವಾಗಲಾರದು.