Site icon Kannada News-suddikshana

ಬಾಂಗ್ಲಾದಲ್ಲಿ ಹಿಂಸಾಚಾರ: ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ; 100 ಸಾವು, ನೂರಾರು ಮಂದಿಗೆ ಗಾಯ

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಯು ಇದೀಗ ಹಿಂಸಾಚಾರಕ್ಕೆ ತಿರುಗಿದೆ. ಈ ಹಿಂಸಾಚಾರದಲ್ಲಿ 14 ಪೊಲೀಸರು ಸೇರಿದಂತೆ ಸುಮಾರು 100 ಮಂದಿ ಮೃತಪಟ್ಟಿದ್ದಾರೆ.

ಪ್ರತಿಭಟನಕಾರರು ಮತ್ತು ಆಡಳಿತಾರೂಢ ಅವಾಮಿ ಲೀಗ್‌ನ ಬೆಂಬಲಿಗರ ನಡುವೆ ಈ ಘರ್ಷಣೆ ನಡೆದಿದೆ. ಇನ್ನು 100 ಮಂದಿ ಸಾವನ್ನಪ್ಪುವ ಜೊತೆಗೆ ನೂರಾರು ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಇಸ್ಕಾನ್ ಮತ್ತು ಕಾಳಿ ದೇವಾಲಯಗಳು ಸೇರಿದಂತೆ ಹಿಂದೂ ದೇವಾಲಯ ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡಿದ್ದು, ಇದರಿಂದಾಗಿ ಭಕ್ತರು ಪರದಾಡಬೇಕಾಗಿದೆ.

ಭಾರತೀಯರು ಮನೆಯಿಂದ ಆಚೆ ಬಾರದಂತೆ ಹಾಗೂ ಬಾಂಗ್ಲಾದಲ್ಲಿರುವ ತನ್ನ ನಾಗರಿಕರಿಗೆ ಸಂಪರ್ಕದಲ್ಲಿ ಇರುವಂತೆ ಭಾರತೀಯ ರಾಯಭಾರಿ ಕಚೇರಿ ಈಗಾಗಲೇ ಸೂಚನೆ ನೀಡಿದೆ. ಹಿಂಸಾಚಾರದಿಂದಾಗಿ ಅಧಿಕಾರಿಗಳು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದು, ಅನಿರ್ದಿಷ್ಟ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲಾಗಿದೆ.

ಬಾಂಗ್ಲಾದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆ ವಿಚಾರವಾಗಿ ಗದ್ದಲ ಎದ್ದಿರುವ ಹಿನ್ನೆಲೆಯಲ್ಲಿ ಶೇಖ್ ಹಸೀನಾ ರಾಜೀನಾಮೆ ನೀಡಬೇಕು. ವಿವಾದಾತ್ಮಕ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

Exit mobile version