Site icon Kannada News-suddikshana

ಗೆಳತಿ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ!

ಬೆಂಗಳೂರು: ಗೆಳತಿ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತಾನು ಪ್ರೀತಿಸುತ್ತಿರುವ ಹುಡುಗಿಯನ್ನು ತನ್ನ ಸ್ನೇಹಿತ ಕೂಡ ಲವ್ ಮಾಡುತ್ತಿದ್ದಾನೆ ಎಂದು ತಿಳಿದ ನಂತರ ಹುಟ್ಟುಹಬ್ಬದ ದಿನವೇ ಗೆಳೆಯನನ್ನು ಇಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಮೃತನನ್ನು ಗೆದ್ದಲಹಳ್ಳಿ ನಿವಾಸಿ ವರುಣ್ ಕೋಟ್ಯಾನ್ ಎಂದು ಗುರುತಿಸಲಾಗಿದ್ದು, ಆತನ ರೂಮ್‌ಮೇಟ್ ದಿವೇಶ್ ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ಮತ್ತು ಮೃತ ಯುವಕ ಒಬ್ಬಳೇ ಯುವತಿಯನ್ನು ಪ್ರೀತಿಸುತ್ತಿದ್ದರು. ಈ ವಿಷಯದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೋಟ್ಯಾನ್ ಅವರು ಬಾಗಲೂರಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ, ದಿವೇಶ್ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಶುಕ್ರವಾರ ಇಬ್ಬರು ಸ್ನೇಹಿತರು ಇವರ ಮನೆಗೆ ಬಂದಿದ್ದು, ನಾಲ್ವರೂ ಪಾರ್ಟಿಗೆಂದು ಕೋರಮಂಗಲಕ್ಕೆ ತೆರಳಿದ್ದರು. ಶನಿವಾರ ಬೆಳಗಿನ ಜಾವ 4.30ರ ಸುಮಾರಿಗೆ ನಾಲ್ವರು ಎರಡು ಬೈಕ್‌ಗಳಲ್ಲಿ ದೇವನಹಳ್ಳಿ ಕಡೆಗೆ ಜಾಲಿ ರೈಡ್‌ಗೆ ಹೋಗಿ ವಾಪಸ್ಸಾಗಿದ್ದರು. ಇವರ ಇಬ್ಬರು ಸ್ನೇಹಿತರಲ್ಲಿ, ಒಬ್ಬ ಕೋಟ್ಯಾನ್ ಕೋಣೆಯಲ್ಲಿ ಮಲಗಿದ್ದ. ಇನ್ನೊಬ್ಬ ತನ್ನ ಮನೆಗೆ ತೆರಳಿದ್ದ.

ವರುಣ್ ಮತ್ತು ದಿವೇಶ್ ತಮ್ಮ ಮನೆಯ ಹೊರಗೆ ಕುಳಿತಿದ್ದರು, ಅಲ್ಲಿ ಅವರು ಹುಡುಗಿಯ ವಿಷಯಕ್ಕೆ ಜಗಳವಾಡಿಕೊಂಡಿದ್ದಾರೆ. ಈ ವೇಳೆ ನಡೆದ ವಾಗ್ವಾದದಲ್ಲಿ ದಿವೇಶ್ ವರುಣ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ನಂತರ ತಪ್ಪಿಸಿಕೊಳ್ಳಲು ಓಡಿಹೋಗಲು ಯತ್ನಿಸುತ್ತಿದ್ದ ವರುಣ್ ನನ್ನು ಬೆನ್ನಟ್ಟಿದ ದಿವೇಶ್ ಆತನನ್ನು ರಸ್ತೆಗೆ ತಳ್ಳಿದ್ದಾನೆ. ನಂತರ ದಿವೇಶ್ ಹತ್ತಿರದಲ್ಲಿದ್ದ ಕಲ್ಲನ್ನು ಎತ್ತಿ ಹಾಕಿ ಕೋಟ್ಯಾನ್‌ನನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ದಿವೇಶ್ ನನ್ನು ಬಂಧಿಸಲಾಗಿದೆ.

Exit mobile version