ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಮಂದಿರದಲ್ಲಿ ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಅರ್ಚಕರಿಗೆ ಶುಕ್ರವಾರದಿಂದ ನೂತನ ಡ್ರೆಸ್ ಕೋಡ್ ಜಾರಿಗೆ ತರಲಾಗಿದೆ. ಇದರಂತೆ, ದೇವಾಲಯದ ಎಲ್ಲಾ ಅರ್ಚಕರು ಪೂಜಾ ಕಾರ್ಯಗಳ ಸಂದರ್ಭದಲ್ಲಿ ಸಾಂಪ್ರದಾಯಿಕ ಹಳದಿ ಬಣ್ಣದ ಹೊಲಿಗೆಯಿಲ್ಲದ ‘ಉತ್ತರೀಯ’ (ಮೇಲ್ವಸ್ತ್ರ) ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ದೇವಾಲಯದ ಎರಡನೇ ಶಿಫ್ಟ್‌ನ ಪೂಜಾ ಸಮಯದಿಂದ ಈ ಹೊಸ ನಿಯಮ ಜಾರಿಗೆ ಬಂದಿದ್ದು, ಶ್ರೀ ರಾಮಜನ್ಮಭೂಮಿ ಮಂದಿರದಲ್ಲಿ ಪೂಜೆ ಸಲ್ಲಿಸುವ ಅರ್ಚಕರ ನೋಟದಲ್ಲಿ ಏಕರೂಪತೆ ಕಂಡುಬರುತ್ತಿದೆ. ದೇವಾಲಯದಲ್ಲಿ ಅನುಸರಿಸಲಾಗುವ ವೈಷ್ಣವ ಪದ್ಧತಿ ಹಾಗೂ ರಾಮನಂದಿ ಸಂಪ್ರದಾಯಕ್ಕೆ ಅನುಗುಣವಾಗಿ ಧಾರ್ಮಿಕ ಸಮಿತಿಯು ಈ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.
ಪ್ರಸ್ತುತ ನಡೆಯುತ್ತಿರುವ ಜೂಲನೋತ್ಸವ (ತೊಟ್ಟಿಲು ಉತ್ಸವ) ಆಚರಣೆಯ ವೇಳೆ ಅರ್ಚಕರು ನೂತನ ಹಳದಿ ಉತ್ತರೀಯ ಧರಿಸಿ ರಾಮಲಲ್ಲಾ ಮೂರ್ತಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಪೂಜಾ ಕಾರ್ಯಗಳಲ್ಲಿ ಶಿಸ್ತು, ಪವಿತ್ರತೆ ಮತ್ತು ವೈದಿಕ ಸಂಪ್ರದಾಯದ ಗೌರವವನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ಮಂದಿರದ ಆಡಳಿತ ಮಂಡಳಿ ತಿಳಿಸಿದೆ.





Leave a comment