Home ಕ್ರೈಂ ನ್ಯೂಸ್ EXCLUSIVE: ಫಿಲ್ಮ್ ಮಾಡ್ತೀನಿ ಎಂದು ಓಡಾಡಿಕೊಂಡಿದ್ದ ದಾವಣಗೆರೆಯ ಕೃಷ್ಣಮೂರ್ತಿ ಡ್ರಗ್ಸ್ ಕೇಸಲ್ಲಿ ಅರೆಸ್ಟ್: ಮೂಲತಃ ಎಲ್ಲಿಯವನು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

EXCLUSIVE: ಫಿಲ್ಮ್ ಮಾಡ್ತೀನಿ ಎಂದು ಓಡಾಡಿಕೊಂಡಿದ್ದ ದಾವಣಗೆರೆಯ ಕೃಷ್ಣಮೂರ್ತಿ ಡ್ರಗ್ಸ್ ಕೇಸಲ್ಲಿ ಅರೆಸ್ಟ್: ಮೂಲತಃ ಎಲ್ಲಿಯವನು?

Share
ದಾವಣಗೆರೆ
Share

SUDDIKSHANA KANNADA NEWS/DAVANAGERE/DATE:29_12_2025

ದಾವಣಗೆರೆ: ನಗರದ ಜೆ. ಹೆಚ್. ಪಟೇಲ್ ಬಡಾವಣಯಲ್ಲಿ ಮಾದಕ ವಸ್ತು ಮಾರಾಟ ಮತ್ತು ಸೇವನೆ ಪ್ರಕರಣ ಸಂಬಂಧ ಬಂಧನಕ್ಕೊಳಗಾದವರದ್ದು ಒಂದೊಂದು ಕಥೆ. ಒಂದೊಂದು ಹಿನ್ನೆಲೆ. ಕಾಂಗ್ರೆಸ್ ಮುಖಂಡರ ಬಂಧನದಿಂದ ಪಕ್ಷಕ್ಕೆ ಮುಜುಗರ ಮಾತ್ರವಲ್ಲ, ಇಡೀ ಗ್ಯಾಂಗ್ ಕಾರ್ಯಚಟುವಟಿಕೆ ಪತ್ತೆ ಹಚ್ಚುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಕೃಷ್ಣಮೂರ್ತಿ ಎಂಬಾತನೇ ಬಂಧನಕ್ಕೊಳಗಾಗಿದ್ದು, ಈತ ಮೂಲತಃ ದಾವಣಗೆರೆಯವನಲ್ಲ.

READ ALSO THIS STORY: BIG NEWS: ಸಚಿವ ಜಮೀರ್ ಅಹ್ಮದ್ ಸೇರಿ ಕಾಂಗ್ರೆಸ್ ನಾಯಕರನ್ನೇ ಗೃಹ ಪ್ರವೇಶಕ್ಕೆ ಕರೆಸಿದ್ದ ಡ್ರಗ್ಸ್ ಕೇಸ್ ನಲ್ಲಿ ಬಂಧಿತನಾದ ಅನ್ವರ್ ಪಾಷಾ ಯಾರು ಗೊತ್ತಾ?

ದಾವಣಗೆರೆ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಕಳೆದ ವಾರದ ಹಿಂದೆ ಡ್ರಗ್ಸ್ ಜಾಲದ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದರು. ಬಂಧಿತರ ಪೈಕಿ ವೇದಮೂರ್ತಿ ಶಾಮನೂರು ಕಾಂಗ್ರೆಸ್ ನ ಪ್ರಭಾವಿ ಮುಖಂಡನಾಗಿದ್ದ. ರಿಯಲ್ ಎಸ್ಟೇಟ್ ನಡೆಸುವ ಮೂಲಕ ಕೋಟ್ಯಂತರ ರೂಪಾಯಿ ಗಳಿಸಿದ್ದ. ಈತನ ಜೊತೆಗೆ ಇನ್ನೂ ಮೂವರು ಬಂಧನಕ್ಕೊಳಗಾಗಿದ್ದರು. ಮತ್ತೆ ದಾವಣಗೆರೆ ಪೊಲೀಸರು ಡ್ರಗ್ಸ್ ದಂಧೆಕೋರರ ಬೇಟೆಯಾಡಿದ್ದು, ಮತ್ತೆ ನಾಲ್ವರನ್ನು
ಸೆರೆ ಹಿಡಿದಿದ್ದಾರೆ.

ಈ ಪೈಕಿ ಕೃಷ್ಣಮೂರ್ತಿ ಎಂಬಾತ ದಾವಣಗೆರೆಯವನಲ್ಲ. ಮೂಲತಃ ತಮಿಳುನಾಡಿನಿಂದ ಬಂದು ದಾವಣಗೆರೆಯಲ್ಲಿ ನೆಲೆಸಿದಾತ. ಇಲ್ಲಿಯೇ ಮದುವೆಯಾಗಿ ಇದ್ದ ಕೃಷ್ಣಮೂರ್ತಿಗೆ ಮೊದಲಿನಿಂದಲೂ ಸಿನಿಮಾ ಗೀಳಿನ ಹುಚ್ಚು.

ಎಲ್ಲರ ಬಳಿಯೂ ನಾನು ಫಿಲ್ಮ್ ಮಾಡ್ತೇನೆ. ಚಿತ್ರರಂಗದಲ್ಲಿ ಹೆಸರು ಮಾಡುತ್ತೇನೆಂದು ಓಡಾಡಿಕೊಂಡಿದ್ದ. ಇದಕ್ಕೆ ಪೂರಕ ಎಂಬಂತೆ ಶಾರ್ಟ್ ಫಿಲ್ಮ್ ಕೂಡ ಮಾಡುತ್ತಿದ್ದ. ಇದರಲ್ಲಿ ನಟಿಸುತ್ತಿದ್ದ. ಈತನಿಗೆ ಶಾಮನೂರು ವೇದಮೂರ್ತಿ, ಅನ್ವರ್ ಪಾಷಾ ಸೇರಿದಂತೆ ಹಲವರು ಸ್ನೇಹಿತರಾದರು. ಬಳಿಕ ದಿಢೀರ್ ಹಣ ಸಂಪಾದನೆ ಮಾಡುವ ಹುಚ್ಚಿಗೆ ಬಿದ್ದ ಕೃಷ್ಣಮೂರ್ತಿ ಡ್ರಗ್ಸ್ ಜಾಲಕ್ಕೆ ಸೇರಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಿನಿಮಾದಲ್ಲಿ ನಟನೆ, ನಿರ್ದೇಶನದತ್ತ ಹೆಚ್ಚು ಆಸಕ್ತಿ ಹೊಂದಿದ್ದ ಕೃಷ್ಣಮೂರ್ತಿ ಫಿಲ್ಮ್ ಎಂದರೆ ತುಂಬಾನೇ ಅಚ್ಚುಮೆಚ್ಚು. ಗಾಂಧಿನಗರಕ್ಕೆ ಹೋಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಸಿನಿಮಾ ತೆಗೆಯುವುದು ಸುಲಭದ ಕೆಲಸವಲ್ಲ ಎಂಬುದು ಗೊತ್ತಿತ್ತು. ಹಾಗಾಗಿ, ಡ್ರಗ್ಸ್ ದಂಧೆಯಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡಿ ಸಿನಿಮಾ ಮಾಡಬೇಕೆಂಬ ಆಸೆ ಹೊಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅನ್ವರ್ ಪಾಷಾ, ಧೋನಿ ಅಭಿಮಾನಿಯಾಗಿದ್ದ ಧೋನಿ @ ಮಂಜುನಾಥ ಎಂದೇ ಫೇಮಸ್ ಆಗಿದ್ದವನ ಜೊತೆ ಬಾಂಧವ್ಯ ಹೊಂದಿದ್ದ. ಈತನ ಜೊತೆಗೆ ಪಾರಸ್ ಎಂಬಾತನ ಸ್ನೇಹವೂ ಬೆಳೆದಿತ್ತು. ಇವರೆಲ್ಲರೂ ಶಾಮನೂರು ವೇದಮೂರ್ತಿ ಸಂಪರ್ಕಕ್ಕೆ ಬಂದ ಬಳಿಕ ಗುಂಪಾಗಿ ಪರಿವರ್ತನೆಯಾಯಿತು. ಇವೆರೆಲ್ಲರೂ ಸೇರಿಕೊಂಡು ವಿದ್ಯಾರ್ಥಿಗಳು ಮತ್ತು ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಕಡಿಮೆ ಹಣಕ್ಕೆ ರಾಜಸ್ತಾನದಿಂದ ಡ್ರಗ್ಸ್ ಖರೀದಿಸಿ ತಂದು ದಾವಣಗೆರೆಯಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.

ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ. ಹೆಚ್. ಪಟೇಲ್ ಬಡಾವಣೆಯ ಪಾರ್ಕ್ ನಲ್ಲಿ ನಾಲ್ವರು ತಮ್ಮ ಬಳಿ ಅಕ್ರಮವಾಗಿ ಗಾಂಜಾ ಮತ್ತು ಮಾದಕ ವಸ್ತುಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಕುರಿತ ಖಚಿತ ವರ್ತಮಾನದ ಮೇರೆಗೆ ವಿದ್ಯಾನಗರ ಪೊಲೀಸರು ದಾಳಿ ನಡೆಸಿ, ಹತ್ತು ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಮಾರಾಟ ಮಾಡಿದ್ದ ಒಂದು ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದರು.

ರಾಜಸ್ತಾನದ ಜೋಧಪುರದ ಹರ್ಮೀನ್ರಗರ್ ಮೇರಿಯನಾಡದ ರಾಮ್ ಸ್ವರೂಪ್, ರಾಜಸ್ತಾನದ ಜೋಧಪುರದ ಲೂಣಿ ಗ್ರಾಮದ ಅಡುಗೆ ಕೆಲಸ ಮಾಡುತ್ತಿದ್ದ ಧೋಲಾರಾಮ್, ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯಲ್ಲಿ ವಾಸವಿದ್ದು ಅಲ್ಯೂಮಿನಿಯಂ ಕೆಲಸ ಮಾಡುತ್ತಿದ್ದ ದೇವ್ ಕಿಶನ್, ಶಾಮನೂರು ಗ್ರಾಮದ ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಎಸ್. ಜಿ. ವೇದಮೂರ್ತಿಯನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು.

ಡಿಸೆಂಬರ್ 22ರಂದು ಮಧ್ಯಾಹ್ನ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಹೆಚ್ ಪಟೇಲ್ ಬಡಾವಣೆಯ ಉದ್ಯಾನವನದಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುವಾಗಲೇ ನಾಲ್ವರು ಸಿಕ್ಕಿಬಿದ್ದಿದ್ದರು. ಪರಾರಿಯಾಗಿದ್ದವರಿಗೆ ಬಲೆ ಬೀಸಿದ್ದರು.

ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶರಣ ಬಸವೇಶ್ವರ ಬಿ. ಹಾಗೂ ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್. ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್
ಠಾಣೆಯ ಪಿಎಸ್ಐ ಜಿ. ನಾಗರಾಜ ನೇತೃತ್ವದಲ್ಲಿ ಈಗ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿತರಿಂದ ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಒಟ್ಟು 90 ಗ್ರಾಂ ಎಂ.ಡಿ.ಎಂ.ಎ ಹಾಗೂ 200 ಗ್ರಾಂ ಓಪಿಯಂ ಎಂಬ ಮಾದಕ ವಸ್ತುಗಳು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಬಂದಿದ್ದ ಹಣ ರೂ 1,00,000 ನಗದು ಸೇರಿದಂತೆ 11 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

Share

Leave a comment

Leave a Reply

Your email address will not be published. Required fields are marked *