SUDDIKSHANA KANNADA NEWS/ DAVANAGERE/ DATE:06-12-2023
ದಾವಣಗೆರೆ: ಕಾನೂನು ಬಾಹಿರವಾಗಿ ಸರ್ಕಾರದ ಅನುಮತಿ ಪರವಾನಗಿ ಇಲ್ಲದೇ ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಆರ್ ಎಂ ಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಭಾರತ್ ಕಾಲೋನಿ ನಿವಾಸಿ ಆಟೋ ಚಾಲಕ ಮಲ್ಲೇಶಪ್ಪ (50), ಬಾಷಾ ನಗರದ ಹೆಚ್ ಪಿ ಕಂಪೆನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸುಹೆಲ್ ರಜಾ (20) ಬಂಧಿತ ಆರೋಪಿಗಳು. ಬಂಧಿತರಿಂದ ಹೆಚ್ ಪಿ ಕಂಪೆನಿ ಹೆಸರಿನ 26 ತುಂಬಿದ ಸಿಲಿಂಡರ್ ಗಳು, 12 ಹೆಚ್ ಪಿ ಹೆಸರಿನ ಖಾಲಿ ಸಿಲಿಂಡರ್ ಗಳು, 3 ಸಣ್ಣ ಖಾಲಿ ಸಿಲಿಂಡರ್ ಗಳು, ಗ್ಯಾಸ್ ರೀಪಿಲ್ಲಿಂಗ್ ಕಡ್ಡಿ, ಗ್ಯಾಸ್ ರಿಫಿಲ್ಲಿಂಗ್ ಯಂತ್ರ ಸೇರಿದಂತೆ ಇತರೆ ತೂಕದ ಯಂತ್ರಗಳು ಹಾಗೂ ಒಂದು ಗೊಡ್ಸ್ ಆಪೆ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.
ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾ ನಗರಕ್ಕೆ ಹೋಗುವ ರಸ್ತೆಯ ಪಕ್ಕದ ಪಾಳು ಬಿದ್ದಿರುವ ಕೆ. ಎಂ ಸಿ ಕಾಂಪೌಂಡ್ ಒಳಗಿನ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಸರ್ಕಾರದ ಅನುಮತಿ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗ್ಯಾಸ್ ರೀ ಪಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಡಿಸಿ ಆರ್ ಬಿ ಘಟಕದ ಪೊಲೀಸ್ ನಿರೀಕ್ಷಕ ರುದ್ರಪ್ಪ ಎಲ್. ವಿದ್ಯಾನಗರ ಪೊಲೀಸ್ ಠಾಣೆ ನಿರೀಕ್ಷಕಿ ಪ್ರಭಾವತಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗ ರಾಘವೇಂದ್ರ, ಮಜೀದ್, ಅಶೋಕ್, ಬಾಲಾಜಿ, ನಟರಾಜ್, ಆಂಜನೇಯ, ಮಾರುತಿ ರವರನ್ನು ಒಳಗೊಂಡ ತಂಡ ಸ್ಥಳಕ್ಕೆ ದಾಳಿ ಮಾಡಿದ್ದು, ಕಾನೂನು ಬಾಹಿರವಾಗಿ ಗ್ಯಾಸ್ ರಿಪಿಲ್ಲಿಂಗ್ ಮಾಡುತ್ತಿದ್ದ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಈ ಸಂಬಂಧ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ವಿಜಯಕುಮಾರ್ ಎಂ. ಸಂತೋಷ್ ಅವರು ಅಭಿನಂದಿಸಿದ್ದಾರೆ.