ದಾವಣಗೆರೆ: ಗಲಾಟೆ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲು ತೆರಳಿದ್ದ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಪ್ತ ಹಾಗೂ ಕಾಂಗ್ರೆಸ್ ಮುಖಂಡನ ಪುತ್ರನನ್ನು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಪುತ್ರ ಹಸನ್ ನನ್ನು ಬಡಾವಣೆ ಪೊಲೀಸರು ರಾತ್ರಿಯೇ ವಶಕ್ಕೆ ಪಡೆದು ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು
ತಿಳಿಸಿವೆ.
ಘಟನೆ ಹಿನ್ನೆಲೆ ಏನು?
ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯ ಬಳಿ ಅಯೂಬ್ ಪೈಲ್ವಾನ್ ಪುತ್ರನ ಗುಂಪು ಮತ್ತು ಜೆಡಿಎಸ್ ಮುಖಂಡ ಅಮಾನುಲ್ಲಾ ಖಾನ್ ಪುತ್ರನ ಗುಂಪಿನ ನಡುವೆ ಜಗಳ ನಡೆದಿತ್ತು. ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಎರಡು ಗುಂಪುಗಳ ಯುವಕರ ನಡುವೆ ಹೊಡೆದಾಟ ನಡೆದಿತ್ತು. ಗಲಾಟೆಯಲ್ಲಿ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ವಿಷಯ ತಿಳಿಯುತ್ತಿದ್ದಂತೆ ಬಡಾವಣೆಯ ಸಿಪಿಐ ಗಾಯತ್ರಿ, ಮಹಿಳಾ
ಅಧಿಕಾರಿ, ಕಾನ್ ಸ್ಚೇಬಲ್ ಗಳಾದ ಕೆಂಚಪ್ಪ, ಹರೀಶ್ ಮೇಲೂ ಹಸನ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಮಾತ್ರವಲ್ಲ, ಮೊಬೈಲ್ ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ತಿಳಿದು ಬಂದಿದೆ.
ಡಿವೈಎಸ್ಪಿ ಬಿ. ಶರಣಬಸವೇಶ್ವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಗಲಾಟೆಕೋರರಿಗೆ ಲಾಠಿ ರುಚಿ ತೋರಿಸಿದ್ದಾರೆ ಎನ್ನಲಾಗಿದೆ. ಎರಡು ಗುಂಪಿನ ನಡುವೆ ಘರ್ಷಣೆಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಾವಣಗೆರೆ ದಕ್ಷಿಣ ಭಾಗದ ಅಕ್ತರ್ ರಜಾ ವೃತ್ತದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಬಳಿಕ ರಾಜಿ ಪಂಚಾಯಿತಿ ಯತ್ನ ನಡೆದರೂ ಮಾತಿಗೆ ಮಾತಿಗೆ ಬೆಳೆದು ವಿಕೋಪಕ್ಕೆ ತಿರುಗಿದೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಾಗಲೂ ಮತ್ತೆ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಸಿಪಿಐ ಗಾಯತ್ರಿ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಪೈಲ್ವಾನ್ ಹುಸೇನ್ ಸಿಕ್ಕಿಬಿದ್ದರೆ, ಮತ್ತೊಬ್ಬ ಪರಾರಿಯಾಗಿದ್ದಾನೆ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.





Leave a comment