Site icon Kannada News-suddikshana

ಚನ್ನಗಿರಿಯಲ್ಲಿ ಗಂಡನಿಗೆ ಮಕ್ಕಳಾಗಲ್ಲವೆಂದು ಪ್ರಿಯಕರನ ಸಂಗ: ಪತಿ ಕೊಂದು ಆತ್ಮಹತ್ಯೆಯಂತೆ ಬಿಂಬಿಸಿದ್ದ ಪತ್ನಿ, ಪ್ರಿಯಕರ ಸೇರಿ ಮೂವರ ಬಂಧಿಸಿದ್ದೇ ರೋಚಕ!

ಚನ್ನಗಿರಿ

SUDDIKSHANA KANNADA NEWS/ DAVANAGERE/ DATE:28_07_2025

ದಾವಣಗೆರೆ: ಚನ್ನಗಿರಿ ತಾಲೂಕಿನ ಅಣ್ಣಾಪುರ ಗ್ರಾಮದಲ್ಲಿ ವ್ಯಕ್ತಿ ಕಳೆದ ಒಂದೂವರೆ ವರ್ಷದ ಹಿಂದೆ ಭದ್ರಾ ನಾಲೆಯಲ್ಲಿ ಕಾಲು ಜಾರಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ತಿರುವು ಸಿಕ್ಕಿದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಕೊಲೆ ಮಾಡಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಆತನ ಪತ್ನಿ, ಪ್ರಿಯಕರ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

READ ALSO THIS STORY: IBPS POನಲ್ಲಿ ಭಾರೀ ಉದ್ಯೋಗಾವಕಾಶ: 5208 ಹುದ್ದೆಗಳು, ಅರ್ಜಿ ದಿನಾಂಕ, ಅರ್ಹತೆ ಮತ್ತು ಪರೀಕ್ಷಾ ವೇಳಾಪಟ್ಟಿ

ಲಕ್ಷ್ಮೀ (28), ಈಕೆ ಪ್ರಿಯಕರ ಬಸವಪಟ್ಟಣ ಹೋಬಳಿಯ ಶೃಂಗಾರಭಾಗ್ ತಾಂಡಾದ ತಿಪ್ಪೇಶ್ ನಾಯ್ಕ (29) ಹಾಗೂ ಸಂತೋಷ್ (29) ಬಂಧಿತ ಆರೋಪಿಗಳು. ಚನ್ನಗಿರಿ ತಾಲೂಕಿನ ಅಣ್ಣಾಪುರ ಗ್ರಾಮದ ವಾಸಿ ನಿಂಗಪ್ಪ (32)
ಕೊಲೆಯಾಗಿದ್ದ ವ್ಯಕ್ತಿ.

ಘಟನೆ ಹಿನ್ನೆಲೆ:

ಚನ್ನಗಿರಿ ತಾಲೂಕಿನ ಬಸವಾಪುರ ಗ್ರಾಮದಲ್ಲಿ 2024ರ ಜನವರಿ 18ರಂದು ನಿಂಗಪ್ಪ ಅವರು ಭದ್ರಾ ನಾಲೆಯಲ್ಲಿ ಕಾಲು ಜಾರಿ ಬಿದ್ದು ಪತಿ ಮೃತಪಟ್ಟಿದ್ದಾರೆ ಎಂದು ಪತ್ನಿ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಶೋಧ ನಡೆಸಿದರೂ ನಿಂಗಪ್ಪ ಅವರ ಶವ ಪತ್ತೆ ಆಗಿರಲಿಲ್ಲ. ಪತ್ನಿಯ ವರ್ತನೆಯು ಪೊಲೀಸರಿಗೆ ಅನುಮಾನ ಕಾಡಿತ್ತು. ತನಿಖೆಯನ್ನು ಮುಂದುವರಿಸಿದಾಗ ಪತ್ನಿಯ ಕಳ್ಳಾಟ ಬಯಲಾಗಿದೆ.

ನಿಂಗಪ್ಪ ಮತ್ತು ಲಕ್ಷ್ಮಿ ಮದುವೆಯಾಗಿ ಎಂಟು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಆಸ್ಪತ್ರೆಗಳಿಗೆ ತೋರಿಸಿ ಚಿಕಿತ್ಸೆ ಪಡೆದರೂ ನಿಂಗಪ್ಪನಿಗೆ ಮಕ್ಕಳಾಗುವುದಿಲ್ಲ ಎಂಬುದು ಖಚಿತವಾಗಿತ್ತು. ನಿಂಗಪ್ಪ ಅಡಿಕೆ ವ್ಯಾಪಾರ ಮಾಡುತ್ತಿದ್ದರು. ಈ
ಸಮಯದಲ್ಲಿ ತಿಪ್ಪೇಶ್ ನಾಯ್ಕಗೆ ಲಕ್ಷ್ಮಿ ಪರಿಚಯವಾಗಿದ್ದರು. ಅದು ಪ್ರೀತಿಗೆ ತಿರುಗಿ ಅನೈತಿಕ ಸಂಬಂಧಕ್ಕೂ ತಿರುಗಿತ್ತು. ಲಕ್ಷ್ಮಿ ಗರ್ಭಿಣಿಯಾಗಿದ್ದಳು. ತನಗೆ ಮಕ್ಕಳು ಆಗುವುದಿಲ್ಲ ಎಂದು ತಿಳಿದಿದ್ದ ಪತ್ನಿಯನ್ನು ಆಸ್ಪತ್ರೆಗೆ
ಕರೆದುಕೊಂಡು ಹೋಗಿ ನಿಂಗಪ್ಪ ಲಕ್ಷ್ಮಿಗೆ ಗರ್ಭಪಾತ ಮಾಡಿಸಿದ್ದರು. ಇದರಿಂದ ಪತಿಯ ವರ್ತನೆಗೆ ಲಕ್ಷ್ಮಿ ಸಿಟ್ಟಿಗೆದ್ದಿದ್ದಳು. ತಾನು ತಾಯಿಯಾಗುವ ಭಾಗ್ಯ ಕಸಿದುಬಿಟ್ಟ ಗಂಡನಿಗೆ ಮುಹೂರ್ತ ಫಿಕ್ಸ್ ಮಾಡಿದಳು. ಪತಿಯನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿ ಕೊಲೆಗೆ ಸ್ಕೆಚ್ ಹಾಕಿದ್ದಳು.

ತನ್ನ ಪ್ರಿಯಕರ ತಿಪ್ಪೇಶ್ ಜೊತೆ ಸೇರಿ ನಿಂಗಪ್ಪನನ್ನು ಪಾರ್ಟಿ ಮಾಡುವ ನೆಪದಲ್ಲಿ ತೈಲೂಕಿನ ನಲ್ಲೂರು ಗ್ರಾಮಕ್ಕೆ ಕರೆದುಕೊಂಡು ಬಂದು ವಿಪರೀತ ಮದ್ಯ ಕುಡಿಸಲಾಗಿದೆ. ಮದ್ಯದ ಅಮಲಿನಲ್ಲಿದ್ದ ನಿಂಗಪ್ಪನನ್ನು ಭದ್ರಾ ನಾಲೆಗೆ ಎಸೆದು ಹೋಗಲಾಗಿತ್ತು. ಆ ಬಳಿಕ ಲಕ್ಷ್ಮಿ ತನ್ನ ಪತಿ ಕಾಣೆಯಾದ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ತವರು ಮನೆ ಹೊನ್ನಾಳಿ ತಾಲೂಕಿನ ತ್ಯಾಗದಕಟ್ಟೆ ಗ್ರಾಮಕ್ಕೆ ಹೋಗಿ ವಾಸವಾಗಿದ್ದರು.

ನಂತರ ತಿಪ್ಪೇಶ್ ನಾಯ್ಕ ಕೆಲಸ ಮಾಡಲೆಂದು ಕೇರಳಕ್ಕೆ ಹೋಗಿ ಅಲ್ಲೇ ಕೆಲಸಕ್ಕೆ ಸೇರಿದ್ದ. ನಂತರ ಲಕ್ಷ್ಮಿಯನ್ನೂ ಅಲ್ಲಿಗೆ ಕರೆಸಿಕೊಂಡಿದ್ದಾನೆ. ತನ್ನ ಪೋಷಕರಿಗೆ ಲಕ್ಷ್ಮಿ ಹೇಳದೇ ಕೇರಳಕ್ಕೆ ಹೋಗಿದ್ದಳು. ಪಾಲಕರು ಲಕ್ಷ್ಮಿ ಕಾಣೆಯಾಗಿದ್ದಾರೆ ಎಂದು ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಡಿವೈಎಸ್ಪಿ ಶ್ಯಾಮ್ ವರ್ಗಿಸ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಅನುಮಾನದ ಮೇರೆಗೆ ತಿಪ್ಪೇಶ್ ನಾಯ್ಕನ ಸ್ನೇಹಿತ ಸಂತೋಷ್ ವಿಚಾರಣೆ ನಡೆಸಿದಾಗ ಕೊಲೆಯ ಸತ್ಯ ಹೊರಬಿದ್ದಿದೆ. ಕೇರಳದಲ್ಲಿ ತಿಪ್ಪೇಶ್ ನಾಯ್ಕ ಮತ್ತು ಲಕ್ಷ್ಮಿ ಬಂಧಿಸಿದ ಚನ್ನಗಿರಿ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

Exit mobile version