Site icon Kannada News-suddikshana

ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಗಂಭೀರ ಗಾಯ; ಚಿಕಿತ್ಸೆ ಫಲಿಸದೆ ಕೊಡಗಿನ ಯೋಧ ಹುತಾತ್ಮ!

ಕೊಡಗು: ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಗಾಯಗೊಂಡಿದ್ದ ಕೊಡಗು ಮೂಲದ ಯೋಧ ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ. ಕೊಡಗು ಮೂಲದ ದಿವಿನ್ (28) ಮೃತ ಯೋಧ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ದಿವಿನ್ ಅವರಿಗೆ ಗಂಭೀರ ಗಾಯಗಳಾಗಿದ್ದವು. ಕಳೆದ 4 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಯೋಧ, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾಮದ ಯೋಧ ದಿವಿನ್, ತಂದೆ ತಾಯಿಗೆ ಏಕೈಕ ಮಗನಾಗಿದ್ದು, 10 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ವೀರ ಯೋಧರನ್ನು ದೇಶಕ್ಕೆ ಕೊಡಗೆ ನೀಡಿದ ಕೊಡಗು ಜಿಲ್ಲೆಯ ಜನರ ಪಾರ್ಥನೆ ಫಲಿಸದೆ ದಿವಿನ್ ಕೊನೆಯುಸಿರೆಳೆದಿದ್ದಾರೆ.

ಕಳೆದವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾನಹ ಪ್ರಪಾತಕ್ಕೆ ಬಿದ್ದು ನಾಲ್ವರು ಯೋಧರು ಮೃತಪಟ್ಟಿದ್ದರು. ಘಟನೆಯಲ್ಲು ದಿವಿನ್ ಅವರಿಗೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೇನಾಧಿಕಾರಿಗಳ ತುರ್ತು ಕರೆ ಹಿನ್ನೆಲೆ ಯೋಧನ ತಾಯಿ ಜಯ ಅವರು ಶ್ರೀನಗರಕ್ಕೆ ತೆರಳಿದ್ದರು.

ಯೋಧನಿಗೆ ಚಿಕಿತ್ಸೆ ನೀಡುತ್ತಿದ್ದ ಶ್ರೀನಗರದ ಆಸ್ಪತ್ರೆಗೆ ತೆರಳಿದ್ದ ತಾಯಿ ಮಗನನ್ನು ಮಾತನಾಡಿಸಿದ್ದರು. ಈ ವೇಳೆ ತಾಯಿಯ ಮಾತು ಆಲಿಸಿ ಹುಬ್ಬು ಹಾರಿಸಿ ಸ್ಪಂದಿಸಿದ್ದರು ಎನ್ನಲಾಗಿದೆ. ಶ್ವಾಸಕೋಶಕ್ಕೆ ತೀವ್ರ ಹಾನಿ ಆದ ಹಿನ್ನಲೆ ಭಾನುವಾರ ರಾತ್ರಿ ದಿವಿನ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ದಿವಿನ್ ಅವರಿಗೆ ಇತ್ತಿಚೆಗೆ ಕೊಡಗು ಮೂಲದ ಯುವತಿ ಜೊತೆ ಮದುವೆಗೆ ದಿನಾಂಕ ಕೂಡ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ.‌

Exit mobile version