ಹಾಸನ: ಮೈಸೂರು ದಸರಾದಲ್ಲಿ (Mysuru Dasara) ಅಂಬಾರಿ ಹೊರುತ್ತಿದ್ದ ಆನೆ ಅರ್ಜುನನ ವೀರ ಮರಣದ ನಂತರ ಇದೀಗ ಅರ್ಜುನನ (Arjuna Elephant) ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಶುರುವಾಗಿದೆ. ಆದರೆ ಸ್ಮಾರಕ ನಿರ್ಮಾಣಕ್ಕೂ (Elephant Arjuna Memorial) ಮೊದಲೇ ಲಕ್ಷಾಂತರ ರೂಪಾಯಿ ಹಣ ಅವ್ಯವಹಾರ ನಡೆಸಿರುವ ಆರೋಪ ಕೇಳಿಬಂದಿದೆ.
ವೀರ ಮರಣವನ್ನಪ್ಪಿದ ಅಂಬಾರಿ ಆನೆ ಅರ್ಜುನನ ಸ್ಮಾರಕ ನಿರ್ಮಾಣ ಮಾಡೋದಕ್ಕೆಂದು ನಟ ದರ್ಶನ್ ಹೆಸರೇಳಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಆಗ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಮೈಸೂರು ಜಿಲ್ಲೆಯ ನವೀನ್ ಎಚ್‌ಎನ್ ಎಂಬಾತ ಅರ್ಜುನ ಪಡೆ ಎಂಬ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಕ್ಯೂ ಆರ್ ಕೋಡ್ ಕಳುಹಿಸಿ ಹಣ ಸಂಗ್ರಹ ಮಾಡಿದ್ದಾನೆ ಎಂದು ತಿಳಿದು ಬಂದಿದ್ದು, ಅರ್ಜುನ ಆನೆಯ ಹೆಸರಿನಲ್ಲಿ ಸಂಗ್ರಹಿಸುವ ಹಣ ನವೀನ್ ಎಚ್‌ಎನ್ ಎಂಬಾತನ ವೈಯಕ್ತಿಕ ಬ್ಯಾಂಕ್ ಖಾತೆಗೆ ಹೋಗುತ್ತಿದ್ದು, ಅರ್ಜುನ ಪಡೆ ಎಂಬ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ ಅರ್ಜುನನ ಸ್ಮಾರಕ ಹೋರಾಟಕ್ಕೆ ನಿಮ್ಮ ಬೆಂಬಲ ಬೇಕು ಅಂತಾ ಹಣಕ್ಕಾಗಿ ಸಹಾಯ ಕೇಳಿದ್ದಾನೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಕ್ಯೂ ಆರ್ ಕೋಡ್ ಕಳುಹಿಸಿ ಅರ್ಜುನ ಆನೆಯ ಹೆಸರಿನಲ್ಲಿ ಹಣ ಸಂಗ್ರಹಿಸುವ ನವೀನ್ ಎಚ್‌ಎನ್ ಎಂಬಾತನ ವಿರುದ್ಧ ಇದೀಗ ಸಕಲೇಶಪುರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಾಗರ್ ಜಾನೇಕೆರೆ ಅವರು ವೀಡಿಯೋ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಈತ ಮಾಡಿರೋ ಪ್ಲಾನ್‌ನಿಂದಲೇ ಸ್ಮಾರಕ ನಿರ್ಮಾಣ ಮಾಡಿರೋ ವಿಚಾರದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಬಂದಿದ್ದು, ಸಹಾಯಾಸ್ತಕ್ಕಾಗಿ ಈತನೇ ನಟ ದರ್ಶನ್ ಅವರ ಪಿಎ ಸಂಪರ್ಕ ಮಾಡಿದ್ದಾನೆ. ಅವರಿಂದ ಕಲ್ಲನ್ನು ತೆಗೆಸಿಕೊಂಡು ಬಂದಿದ್ದಾನೆ. ಅದೇ ಕಲ್ಲಿಗೆ ಅರಣ್ಯ ಇಲಾಖೆಯವರಿಂದ 30 ಸಾವಿರ ಹಣವನ್ನೂ ಪಡೆದುಕೊಂಡು ಹೋಗಿದ್ದಾನೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಂದ ಹಣ ಪಡೆಯೋದಕ್ಕೆ ಈತನಿಗೆ ಅನುಮತಿ ಕೊಟ್ಟವರು ಯಾರು ಅಂತಾ ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಾಗರ್ ಜಾನೇಕೆರೆ ಅವರು ವೀಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಈತನ ಪರ್ಸನಲ್ ಆಕೌಂಟ್‌ಗೆ ಯಾರೂ ಹಣ ಹಾಕದಂತೆ ಒತ್ತಾಯ ಮಾಡಿದ್ದಾರಲ್ಲದೇ, ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
ಈಗಾಗಲೇ ಅರ್ಜುನ ಆನೆಯ ಹೆಸರಿನಲ್ಲಿ ಹಣ ಸಂಗ್ರಹಿಸುವ ನವೀನ್ ಎಚ್‌ಎನ್ ಎಂಬಾತನ ವೈಯಕ್ತಿಕ ಅಕೌಂಟ್‌ಗೆ ನೂರಾರು ಜನರಿಂದ ಹಣ ಸಂದಾಯ ಮಾಡ್ತಿರೋ ಫೊಟೋಗಳು ವೈರಲ್ ಆಗ್ತಿದ್ದು, ಹಣ ಸಂದಾಯ ಮಾಡಿ ಜನರು ಸ್ಕ್ರೀನ್ ಶಾಟ್ ಹಾಕ್ತಿದ್ದಾರೆ. ಹೀಗಾಗಿ ಸಂದಾಯವಾಗಿರೋ ಹಣವನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.