Site icon Kannada News-suddikshana

EXCLUSIVE: ಭದ್ರಾ ಅಣೆಕಟ್ಟು ಬಲದಂಡೆ ಕಾಮಗಾರಿ ಸ್ಥಗಿತಕ್ಕೆ ಮನವಿ: ಸಿಎಂ, ಡಿಸಿಎಂ ಏನಂದ್ರು?

BHADRA DAM

SUDDIKSHANA KANNADA NEWS/ DAVANAGERE/ DATE-28-06-2025

ದಾವಣಗೆರೆ: ಭದ್ರಾ ಅಣೆಕಟ್ಟು ಡ್ಯಾಂನ ಬಲದಂಡೆ ಸೀಳಿ ಕಾಮಗಾರಿ ಸ್ಥಗಿತಗೊಳಿಸಿ ಭದ್ರಾ ಅಚ್ಚುಕಟ್ಟು ಪ್ರದೇಶದ ಹಿನ್ನೀರು ಪ್ರದೇಶ ಅಥವಾ ಬೇರೆ ಮಾರ್ಗದಿಂದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಭದ್ರಾ ಜಲಾಶಯದ ಹೊಸ್ತಿಲಲ್ಲಿನ ಬಲದಂಡೆ ನಾಲೆಯಿಂದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 1236 ಗ್ರಾಮಗಳಿಗೆ ಹಾಗೂ ಹೊಸದುರ್ಗ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಜಲಜೀವನ್ ಮಿಷನ್ ಅಡಿ ಕೈಗೆತ್ತಿಕೊಂಡಿರುವ ಕಾಮಗಾರಿ ಈಗ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಈ ಕಾಮಗಾರಿ ಸ್ಥಗಿತಗೊಳಿಸುವಂತೆ ಕೋರಿದರು.

ಈ ಸುದ್ದಿಯನ್ನೂ ಓದಿ: ಭದ್ರಾ ನಾಲೆ ಸೀಳಿ ಕಾಮಗಾರಿ ಸ್ಥಗಿತಕ್ಕೆ ಆಗ್ರಹ: ಜನಜೀವನಕ್ಕೆ ತೊಂದರೆ ಆಗದ ದಾವಣಗೆರೆ ನಗರ ಬಂದ್

‘ಬಲದಂಡೆಯನ್ನು ಸೀಳಿ ನೀರು ಒಯ್ಯಲಾಗುತ್ತಿದೆ. ಇದರಿಂದ ಕಾಲುವೆಯ ನೀರಿನ ಸಹಜ ಹರಿವಿಗೆಎ ಅಡ್ಡಿಯಾಗಲಿದೆ. ಆರಂಭದಲ್ಲಿಯೇ ನೀರಿನ ಹರಿವಿನ ವೇಗ ಕಡಿಮೆ ಆದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ, ಹೊನ್ನಾಳಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೊನೆಯ ಭಾಗದವರೆಗೆ ನೀರು ಸರಾಗವಾಗಿ ಹರಿಯುವುದಿಲ್ಲ’ ಎಂಬುದು ರೈತರ ಆರೋಪವಾಗಿದೆ.

ಅಲ್ಲದೇ, ಭದ್ರಾ ಮೇಲ್ದಂಡೆ ಯೋಜನೆಯಡಿ ಜಲಾಶಯದಿಂದ ಹೊಸದುರ್ಗ, ಕಡೂರು, ಚಿಕ್ಕಮಗಳೂರು, ತರೀಕೆರೆ ತಾಲೂಕು ಸೇರಿದಂತೆ ಬಯಲು ಸೀಮೆಯ ಹಳ್ಳಿಗಳಿಗೆ ನಿತ್ಯ 30 ಕ್ಯುಸೆಕ್‌ನಂತೆ ವರ್ಷವಿಡೀ ಕುಡಿಯುವ ನೀರು ಕೊಡಲು 1 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಶಾಸಕ  ಕೆ. ಎಸ್. ಬಸವಂತಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಕೂಡಲೇ ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಜಿಲ್ಲೆಯ ಎಲ್ಲಾ ಶಾಸಕರು, ಭದ್ರಾ ಬಲದಂಡೆ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರ ಸಭೆ ಕರೆದು ಈ ಭಾಗದ ರೈತರಿಗೆ ನ್ಯಾಯ ಒದಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಶಾಸಕರ ಮನವಿ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೂಡಲೇ ಆ ಭಾಗದ ಸಚಿವರು, ಶಾಸಕರು,ರೈತ ಮುಖಂಡರೊಂದಿಗೆ ಸಭೆ ಆಯೋಜನೆ ಮಾಡಲು ಸಂಬಂಧಪಟ್ಟ ಜಲಸಂಪನ್ಮೂಲ ಸಚಿವರಿಗೆ ಸೂಚಿಸುವುದಾಗಿ ತಿಳಿಸಿದರು. ಅದೇ ರೀತಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಮನವಿ ಸಲ್ಲಿಸಿ ಭದ್ರಾ ಬಲದಂಡೆ ಕಾಮಗಾರಿ ಸ್ಥಗಿತಗೊಳಿಸಿ ಬೇರೆ ಮಾರ್ಗದಿಂದ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕೂಡಲೇ ರೈತ ಮುಖಂಡರ ಸಭೆ ಕರೆಯುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ರೈತ ಮುಖಂಡರಾದ ರಾಮಗೊಂಡನಹಳ್ಳಿ ಶರಣಪ್ಪ, ಮಲ್ಲಿಕಾರ್ಜುನ್, ಅತ್ತಿಗೆರೆ ಮಹಾದೇವಪ್ಪ, ಬಾಡದ ರವಿ ಸೇರಿದಂತೆ ಇನ್ನಿತರರಿದ್ದರು.

Exit mobile version