ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಎಪಿಎಂಸಿಗಳ ಪ್ರಾಂಗಣ ಅಭಿವೃದ್ಧಿ ಉದ್ದೇಶಕ್ಕೆ ಮಾರುಕಟ್ಟೆ ನೆರವು ನಿಧಿ ಸ್ಥಾಪನೆ ಮಾಡಲಾಗಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಧಾನಪರಿಷತ್‌ನಲ್ಲಿ ಮಂಗಳವಾರ ಸದಸ್ಯ ಅಬ್ಜುಲ್ ಜಬ್ಬಾರ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಎಪಿಎಂಸಿಗಳು ಸಂಗ್ರಹ ಮಾಡುವ 60 ಪೈಸೆ ಶುಲ್ಕದಲ್ಲಿ ಮೂರು ಪೈಸೆಯನ್ನು ಮಾರುಕಟ್ಟೆ ನೆರವು ನಿಧಿಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ನೆರವು ನಿಧಿಯಿಂದಲೇ ಹಲವು ಎಪಿಎಂಸಿ ಪ್ರಾಂಗಣಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
2024-25ನೇ ಸಾಲಿನಲ್ಲಿ 498 ಕೋಟಿ ರೂ. ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದೆ. ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ 2023-24ನೇ ಸಾಲಿನಲ್ಲಿ ವಹಿವಾಟು ಪ್ರಮಾಣ ಹೆಚ್ಚಾಗಿದ್ದು, ಎಪಿಎಂಸಿ ಆವರಣದಲ್ಲಿ 85,626 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಕೃಷಿ ಉತ್ಪನ್ನಗಳ ಆವಕವಾಗಿದೆ.
2023-24ನೇ ಸಾಲಿನಲ್ಲಿ 30 ಲಕ್ಷ ಮೆಟ್ರಿಕ್ ಟನ್ ವಹಿವಾಟು ನಡೆದಿದ್ದು ಈ ಪ್ರಮಾಣ 2024-25ನೇ ಸಾಲಿನಲ್ಲಿ 164 ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ. ಕಾಯ್ದೆ ಮರುಸ್ಥಾಪನೆ ಮಾಡಿ ಎಲ್ಲ ಎಪಿಎಂಸಿಗಳನ್ನು ರೈತಸ್ನೇಹಿ ಹಾಗೂ ವರ್ತಕಸ್ನೇಹಿಯಾಗಿ ರೂಪಿಸಲಾಗಿದೆ. ಮಾರುಕಟ್ಟೆ ಪ್ರಾಂಗಣಗಳ ಜೊತೆಗೆ ಪ್ರಾಂಗಣದ ಹೊರಗಿನ ವಹಿವಾಟು ನಿಯಂತ್ರಿಸಲು ಎಪಿಎಂಸಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ಪ್ರಸ್ತುತ ಆನ್‌ಲೈನ್ ಚಟುವಟಿಕೆ ಹೆಚ್ಚಳವಾಗುತ್ತಿದ್ದು, ಅಧಿಸೂಚಿತ ಉತ್ಪನ್ನಗಳಲ್ಲಿ ವ್ಯವಹರಿಸುತ್ತಿರುವುದರಿಂದ ಅಂತಹ ಚಟುವಟಿಕೆಗಳನ್ನು ಕಾನೂನು ವ್ಯಾಪ್ತಿಗೊಳಪಡಿಸುವ ಅಗತ್ಯವಿದೆ. ಹೀಗಾಗಿ ಇ ಕಾಮರ್ಸ್ ಫ್ಲಾಟ್‌ಫಾರಂ ವ್ಯಾಖ್ಯಾನ ಮತ್ತು ಅದರ ಸ್ಥಾಪನೆ, ನಿರ್ವಹಣೆ, ಜವಾಬ್ದಾರಿ, ಕರ್ತವ್ಯಗಳು ಮತ್ತು ದಂಡನಾತ್ಮಕ ಕ್ರಮಗಳಿಗೆ ಅವಕಾಶ ಕಲ್ಪಿಸಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಮಾರಾಟ ರಂಗದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ಹಾಗೂ ನಿಯಮಾವಳಿ 1968ಕ್ಕೆ ತಿದ್ದುಪಡಿ ಮಾಡಲಾಗಿದೆ.
ರೈತರ ಹಿತದೃಷ್ಟಿಯಿಂದಲೇ ಕಳೆದ ಮೂರು ವರ್ಷಗಳಲ್ಲಿ ಎಪಿಎಂಸಿ ಕಾಯ್ದೆಗೆ ಕೆಲವು ತಿದ್ದುಪಡಿ ತರಲಾಗಿದ್ದು, ಇದರಿಂದ ಪರಿಣಾಮಕಾರಿ ಬದಲಾವಣೆಗಳಾಗಿವೆ. ಎಪಿಎಂಸಿಗಳ ವಹಿವಾಟು ಪ್ರಮಾಣ ಹೆಚ್ಚಳವಾಗಿದೆ. ಎಲ್ಲ ಎಪಿಎಂಸಿಗಳನ್ನು ಆಕರ್ಷಕ ಮತ್ತು ಕ್ರಿಯಾತ್ಮಕಗೊಳಿಸಲು ಸಾಧ್ಯವಾಗಿದೆ. ಉಗ್ರಾಣ, ಸೈಲೋಸ್, ಶೀತಲಗೃಹ, ಪ್ಯಾಕ್ ಹೌಸ್‌ಗಳು, ಶ್ರೇಣೀಕರಿಸುವ ಮತ್ತು ಪ್ಯಾಕ್ ಮಾಡುವ ಘಟಕವನ್ನು ಉಪ ಪ್ರಾಂಗಣ ಎಂದು ಘೋಷಣೆ ಮಾಡುವ ಅಧಿಕಾರವನ್ನು ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
- Agriculture Market Reforms
- Agriculture Produce Inflow.
- APMC Transaction Increase
- E-commerce Amendment Act
- Farmer Friendly APMC
- Karnataka Agri News
- Market Fees Karnataka
- Shivanand Patil
- ಇ-ಕಾಮರ್ಸ್ ತಿದ್ದುಪಡಿ
- ಎಪಿಎಂಸಿ ವಹಿವಾಟು
- ಕರ್ನಾಟಕ ಕೃಷಿ ಸುದ್ದಿಗಳು
- ಕೃಷಿ ಉತ್ಪನ್ನಗಳ ಆವಕ.
- ಕೃಷಿ ಮಾರುಕಟ್ಟೆ ಸುಧಾರಣೆ
- ಮಾರುಕಟ್ಟೆ ಶುಲ್ಕ
- ರೈತಸ್ನೇಹಿ ಎಪಿಎಂಸಿ
- ಶಿವಾನಂದ ಪಾಟೀಲ





Leave a comment