Home ದಾವಣಗೆರೆ ಐಎಎಸ್ ಆಕಾಂಕ್ಷಿಗಳು ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಬಿಟ್ಟು ಹಿಂದಿ ಮತ್ತು ಸಂಸ್ಕೃತ ಭಾಷೆ ಆಯ್ಕೆ: ಜಿ. ಬಿ. ವಿನಯ್ ಕುಮಾರ್ ಕಳವಳ
ದಾವಣಗೆರೆನವದೆಹಲಿಬೆಂಗಳೂರು

ಐಎಎಸ್ ಆಕಾಂಕ್ಷಿಗಳು ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಬಿಟ್ಟು ಹಿಂದಿ ಮತ್ತು ಸಂಸ್ಕೃತ ಭಾಷೆ ಆಯ್ಕೆ: ಜಿ. ಬಿ. ವಿನಯ್ ಕುಮಾರ್ ಕಳವಳ

Share
ಕನ್ನಡ
Share

ದಾವಣಗೆರೆ: ಐಎಎಸ್ ಆಕಾಂಕ್ಷಿಗಳು ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಭಾಷೆ ಬಿಟ್ಟು ಹಿಂದಿ ಮತ್ತು ಸಂಸ್ಕೃತ ಭಾಷೆ ಆಯ್ಕೆ ಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರು ಕಳವಳ ವ್ಯಕ್ತಪಡಿಸಿದರು.

ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಕರ್ನಾಟಕ ಯುವರಕ್ಷಣಾ ವೇದಿಕೆ ಜಿಲ್ಲಾ ಘಟಕದ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಹಾಗೂ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯ ಮಟ್ಟದ “ಕರ್ನಾಟಕ ಸೇವಾ ರತ್ನ ಬೆಳ್ಳಿ ಪದಕ” ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಈ ಸುದ್ದಿಯನ್ನೂ ಓದಿ: ದಾವಣಗೆರೆಯಲ್ಲಿ ಡ್ರಗ್ಸ್ ಪೆಡ್ಲರ್ ಗಳಿಂದ ಖರೀದಿಸಿ ಎಷ್ಟು ಹಣಕ್ಕೆ ಮಾರಾಟ ಮಾಡ್ತಿದ್ದರು? ಶಾಮನೂರು ವೇದಮೂರ್ತಿ ಬಾಯ್ಬಿಟ್ಟ ಸ್ಫೋಟಕ ಮಾಹಿತಿ!

ನಾನು ಬಂದಿರುವುದು ಶಿಕ್ಷಣ ಕ್ಷೇತ್ರದಿಂದ. ಐಎಎಸ್ ಪರೀಕ್ಷೆಯಲ್ಲಿ ಆಕಾಂಕ್ಷಿಗಳು ಇಂಗ್ಲೀಷ್ ಕಡ್ಡಾಯದ ಜೊತೆಗೆ ಮಾತೃಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು, ಈ ನೆಲದ ಗಾಳಿ ಸೇವಿಸಿ ಉಸಿರಾಡುತ್ತಿರುವ ಆಕಾಂಕ್ಷಿಗಳು ಕನ್ನಡ ಆಯ್ಕೆ ಬಿಟ್ಟು ಹಿಂದಿ ಮತ್ತು ಸಂಸ್ಕೃತ ಆಯ್ಕೆ ಮಾಡಿಕೊಳ್ಳುತ್ತಿರುವುದನ್ನು ನೋಡಿದರೆ ಭವಿಷ್ಯದಲ್ಲಿ ಕನ್ನಡಕ್ಕೆ ಯಾವ ರೀತಿಯ ಕುತ್ತು ಎದುರಾಗುತ್ತದೆ ಎಂಬುದನ್ನು ಊಹಿಸಲು ಆಗದು ಎಂದು ಆತಂಕ ವ್ಯಕ್ತಪಡಿಸಿದರು.

ಇಂಗ್ಲೀಷ್ ಮಾಧ್ಯಮದಲ್ಲಿ ಓದಿದವರಿಗೆ ಕನ್ನಡ ಭಾಷೆ ಓದಲು ಬರುತ್ತದೆ. ಆದರೆ ಬರೆಯಲು ಬರುವುದಿಲ್ಲ. ಕನ್ನಡದಲ್ಲಿ ಬರೆಯುವಷ್ಟು ಶಿಕ್ಷಣ ಅವರಿಗೆ ಸಿಕ್ಕಿರುವುದಿಲ್ಲ. ಇಲ್ಲವೇ ಅವರು ಕಲಿಯಲು ಅವಕಾಶ ಸಿಕ್ಕಿರುವುದಿಲ್ಲ. ನನ್ನ ಮಕ್ಕಳು ಇಂಗ್ಲೀಷ್ ಭಾಷೆಯಲ್ಲಿ ಓದುತ್ತಿದ್ದರೂ ಮನೆಗೆ ಬಂದಾಗ ಕನ್ನಡ ಕಲಿಸುತ್ತಿದ್ದೇವೆ. ಮಾತನಾಡುವುದು, ಬರೆಯುವುದು ಹಾಗೂ ಓದುವುದನ್ನು ಹೇಳಿಕೊಡುತ್ತೇವೆ. ಪೋಷಕರು ಇಂಗ್ಲೀಷ್ ಮೇಲಿನ ಅತಿಯಾದ ವ್ಯಾಮೋಹ ಬಿಟ್ಟು ಕನ್ನಡ ಕಲಿಕೆಗೆ ಒತ್ತು ನೀಡಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಮುಂದಿನ ಹತ್ತರಿಂದ 15 ವರ್ಷಗಳಲ್ಲಿ ಕರ್ನಾಟಕದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕನ್ನಡ ಸಾಂಕೇತಿಕ ಭಾಷೆಯಾಗಿ ಉಳಿದರೆ ಅಚ್ಚರಿಪಡಬೇಕಿಲ್ಲ. ಸಾಹಿತ್ಯ ಸೃಷ್ಟಿಸುವಂಥ ಭಾಷೆ ಇಲ್ಲ. ಮಾತನಾಡಲು ಸೀಮಿತವಾಗಿಬಿಡುತ್ತೋ ಎನ್ನೋ ಭಯವೂ ಕಾಡುತ್ತಿದೆ. ಕಾಲೇಜು, ವಿಶ್ವಿವಿದ್ಯಾನಿಲಯಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕು ಎಂಬುದು ನನ್ನ ಅಪೇಕ್ಷೆ ಎಂದು ಹೇಳಿದರು.

ಕನ್ನಡ ಮಾಧ್ಯಮದಲ್ಲಿ ಮಕ್ಕಳು ಕಲಿಯುತ್ತಿದ್ದರೂ ಭವಿಷ್ಯದಲ್ಲಿ ಉಜ್ವಲ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲವಾಗಿಬಿಟ್ಟಿದೆ. ದಾವಣಗೆರೆಯು ಸಾಂಸ್ಕೃತಿಕ ನಗರಿಯಾಗಿ ಬೆಳೆಯಬೇಕು. ಸಾಹಿತ್ಯದಲ್ಲಿ ಆಸಕ್ತಿ, ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಿದವರು ಇದ್ದಾರೆ. ಇಂಥವರಿಗೆ ಉನ್ನತ ಅವಕಾಶಗಳು ಸಿಗುವಂತಾಗಬೇಕು. ಶಿಕ್ಷಣ ಸಂಸ್ಥೆಗಳು, ಆರೋಗ್ಯಕ್ಕೆ ಸಂಬಂಧಿತ ಸಂಸ್ಥೆಗಳು, ಸಾಂಸ್ಕೃತಿಕ ಸಂಸ್ಥೆಗಳು ಕ್ರಿಯಾಶೀಲವಾಗಬೇಕಾದ ತುರ್ತು ಅಗತ್ಯವಿದೆ. ದಾವಣಗೆರೆ ವಿದ್ಯಾಕಾಶಿ ಎನ್ನುತ್ತೇವೆ. ಗೌರವಪೂರ್ವಕವಾಗಿ ಹೇಳುತ್ತೇವೆ. ಸುಸಜ್ಜಿತ ರಂಗಮಂದಿರವಿಲ್ಲ. ಜಾತ್ಯಾತೀತ, ಧರ್ಮಾತೀತವಾಗಿ ನಡೆಯುವ ಸುಸಜ್ಜಿತ ರಂಗಮಂದಿರದ ಅವಶ್ಯಕತೆ ಜರೂರು ಇದೆ. ಸಾರ್ವಜನಿಕರು ಸಂಘಟಿತರಾಗಿ ಒಗ್ಗಟ್ಟಾಗಿ ಈ ನಿಟ್ಟಿನಲ್ಲಿ ಶ್ರಮ ವಹಿಸಬೇಕಿದೆ. ಹೆಚ್ಚಾಗಿ ಸಾಹಿತ್ಯ ಉತ್ಸವಗಳು ನಡೆಯುವಂತಾಗಬೇಕು. ಬೆಂಗಳೂರು, ಮೈಸೂರಿನಂತೆ ಇಲ್ಲಿಯೂ ಕನ್ನಡದ ಪ್ರತಿಭೆಗಳಿಗೆ ದೊಡ್ಡ ದೊಡ್ಡ ವೇದಿಕೆ ಸಿಗಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತಾಗಬೇಕು. ದೊಡ್ಡಮಟ್ಟದಲ್ಲಿ ಸಾಹಿತ್ಯ ಉತ್ಸವ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಐಎಎಸ್ ಆಕಾಂಕ್ಷಿಗಳಿಗೆ ಮಾರ್ಗದರ್ಶನ, ಐಪಿಎಸ್ ಅಧಿಕಾರಿಗಳನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಕನ್ನಡ ಸಾಹಿತ್ಯ. ಸಂಸ್ಕೃತಿ ಗಟ್ಟಿಯಾಗಬೇಕು. ಕನ್ನಡಕ್ಕೆ ಸಂಬಂಧಿಸಿದಂತೆ ಜನಪದ ಕಲೆಗಳು, ಕ್ರೀಡೆಗಳು, ಕಲೆ ಸೇರಿದಂತೆ ಬೇರೆ
ಬೇರೆ ರೀತಿಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದರು.

ಪುರವರ್ಗ ಆವರಗೊಳ್ಳ ಶ್ರೀಕ್ಷೇತ್ರದ ಷ|| ಬ್ರ|| ಶ್ರೀ ಓಂಕಾರ ಶಿವಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ. ಸುನೀಲ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದ
ಈ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ನಾಯಕಿ ಗಾಯಿತ್ರಿ ಸಿದ್ದೇಶ್ವರ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಬಿ.ಜೆ. ಅಜಯ್ ಕುಮಾರ್, ಎ. ಕೆ. ಫೌಂಡೇಶನ್ ಸಂಸ್ಥಾಪಕ ಕೆ.ಬಿ. ಕೊಟ್ರೇಶ್, ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ಕನ್ನಡ ಚಳವಳಿ ಹೋರಾಟಗಾರ ಬಸವರಾಜ ಐರಣಿ, ಹಿರಿಯ ವಕೀಲ ರಾಮಚಂದ್ರ ಕಲಾಲ್, ಎಸ್.ಟಿ. ಕುಸುಮ ಶ್ರೇಷ್ಠಿ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ. ಸುನೀಲ್ ಕುಮಾರ್, ಶಕುಂತಲಮ್ಮ, ನಾಗರತ್ನಮ್ಮ, ವಿನೂತ ಸೇರಿದಂತೆ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *