SUDDIKSHANA KANNADA NEWS/ DAVANAGERE/ DATE:24-12-2023
ದಾವಣಗೆರೆ: ಬೈಕ್ ನಲ್ಲಿ ಬಂದ ಮೂವರು ವೃದ್ಧರೊಬ್ಬರನ್ನು ತೋಟದ ಮನೆಯಲ್ಲಿ ಕೊಲೆ ಮಾಡಲು ಯತ್ನಿಸಿದ ಘಟನೆ ಹೊನ್ನಾಳಿ – ನ್ಯಾಮತಿ ತಾಲೂಕಿನ ಕುಂಕೋವ ಗ್ರಾಮದಲ್ಲಿ ನಡೆದಿದೆ.
ಪಾಂಡುರಂಗಯ್ಯ ಹಲ್ಲೆಗೊಳಗಾದ ವೃದ್ಧ. ನ್ಯಾಮತಿ ತಾಲೂಕಿನ ಕುಂಕೋವ ಗ್ರಾಮದ ತೋಟದ ಮನೆಯಲ್ಲಿ ಪಾಂಡುರಂಗಯ್ಯ ಹಾಗೂ ಲಕ್ಷ್ಮಮ್ಮ ವಾಸವಾಗಿದ್ದರು. ಶುಕ್ರವಾರ ರಾತ್ರಿ 11.30ರ ಸುಮಾರಿನಲ್ಲಿ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮನೆಯ ಬಾಗಿಲು ಬಡಿದಿದ್ದಾರೆ. ಕುಡಿಯಲು ನೀರು ಕೊಡಿ ಎಂದು ಮನೆಯವರನ್ನು ಕೇಳಿದ್ದಾರೆ. ದಂಪತಿ ಕೊಟ್ಟ ನೀರು ತೆಗೆದುಕೊಂಡ ಹೋದವರು ಸ್ವಲ್ಪ ಸಮಯದ ಬಳಿಕ ಬಂದು ಹರಿಶಿನ ನೀಡುವಂತೆ ಕೇಳಿದ್ದಾರೆ. ಅದಾದ ಬಳಿಕ ಸಕ್ಕರೆ ಕೊಡಿ ಎಂದು ಕೇಳಿದ್ದಾರೆ.
ಸಕ್ಕರೆ ಇಲ್ಲ ಎನ್ನುತ್ತಿದ್ದಂತೆ ಪತಿಯನ್ನು ಕೆಳಗಡೆ ಬೀಳಿಸಿ ಚಾಕುವಿನಿಂದ ಕುತ್ತಿಗೆ ಕೊಯ್ಯಲು ಆರಂಭಿಸಿದ್ದು, ಮನೆಯೊಳಗಿದ್ದ ಲಕ್ಷ್ಮಮ್ಮ ಹೊರಗೆ ಬಂದು ನೋಡುತ್ತಿದ್ದಂತೆ ಒಮ್ಮೆಲೆ ಶಾಕ್ ಆಗಿದ್ದಾರೆ. ಒಬ್ಬ ವ್ಯಕ್ತಿಯು
ಪಾಂಡುರಂಗಯ್ಯರ ಕಾಲು ಹಿಡಿದುಕೊಂಡಿದ್ದರೆ, ಮತ್ತೊಬ್ಬ ಕತ್ತು ಕೊಯ್ಯುತ್ತಿದ್ದನ್ನು ನೋಡಿ ಕೂಗಾಡಿದ್ದಾರೆ. ಆಗ ಅಲ್ಲಿಯೇ ಬಿಟ್ಟು ದುಷ್ಕರ್ಮಿಗಳು ಓಡಿ ಹೋಗಿದ್ದಾರೆ ಎಂದು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಲಕ್ಷ್ಮಮ್ಮ ತಿಳಿಸಿದ್ದಾರೆ.
ಕೂಡಲೇ ಹಾಲೇಶ್ ಎಂಬುವವರು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಪಾಂಡುರಂಗಯ್ಯ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳು ಚಾಕುವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.