Site icon Kannada News-suddikshana

ಕರ್ನಾಟಕವಾಗಲೀ, ಶಿವಮೊಗ್ಗವಾಗಲೀ ಬಿಜೆಪಿ ಭದ್ರಕೋಟೆ ಎಂದೇನಿಲ್ಲ, ಯಾವ ಭದ್ರಕೋಟೆಯಾದರೂ ಬದಲಾಗುತ್ತೆ: ನಟ ಶಿವರಾಜ್ ಕುಮಾರ್

SUDDIKSHANA KANNADA NEWS/ DAVANAGERE/ DATE:11-03-2024

ದಾವಣಗೆರೆ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂದು ಹೇಳುತ್ತಿದ್ದಾರೆ. ಆದರೆ ಈಗ ಅದೆಲ್ಲ ಇಲ್ಲ. ಯಾವ ಭದ್ರಕೋಟೆಗಳಾದರೂ ಕೂಡ ಬದಲಾಗುತ್ತದೆ. ಈ ಬಾರಿ ಅಭಿಮಾನಿಗಳು, ದೇವರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಹ್ಯಾಟ್ರಿಕ್ ಹೀರೋ, ನಟ ಶಿವರಾಜ್ ಕುಮಾರ್ ಹೇಳಿದರು.

ನಗರದ ತ್ರಿನೇತ್ರ ಚಿತ್ರಮಂದಿರದಲ್ಲಿ ಕರಟಕ ದಮನಕ ಚಿತ್ರದ ವಿಜಯ ಯಾತ್ರೆ ಮುಗಿಸಿದ ಬಳಿಕ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು ಶಿವಮೊಗ್ಗದ ಬಗ್ಗೆ ಗೀತಾ ಶಿವರಾಜ್ ಕುಮಾರ್ ಗೆ ಏನು ಗೊತ್ತಿಲ್ಲ ಅನ್ನೋ ಆರೋಪ ಸರಿಯಲ್ಲ ಎಂದು ಹೇಳಿದರು.

ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲೇ ಹುಟ್ಟಿರುವುದು. ಯಾವಾಗಲೂ ಶಿವಮೊಗ್ಗಕ್ಕೆ ಹೋಗಿ ಬರುತ್ತಿದ್ದಾರೆ. ಅವರ ಅಪ್ಪ ಎಸ್. ಬಂಗಾರಪ್ಪ ಅವರು ಸಿಎಂ ಆಗಿದ್ದವರು ಅವರಿಗೆ ಅಲ್ಲಿನ ಸಮಸ್ಯೆ ಬಗ್ಗೆ ಗೊತ್ತಿದೆ. ಅವರ ಸಹೋದರ ಮಧು ಬಂಗಾರಪ್ಪ ಕೂಡ ರಾಜಕೀಯದಲ್ಲಿ ಇದ್ದಾರೆ. ಹಾಗಾಗಿ, ಗೀತಾಗೂ ಸಹ ಶಿವಮೊಗ್ಗದ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ತಿಳಿಸಿದರು.

ಗೀತಾ ಶಿವರಾಜ್ ಕುಮಾರ್ ವಿರುದ್ಧ ಕೆಲ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಗೆ ಶಿವಮೊಗ್ಗದ ಸಮಸ್ಯೆ ಬಗ್ಗೆ ಗೊತ್ತಿದೆ.. ಅವರ ಕುಟುಂಬವೂ ರಾಜಕಾರಣಿ ಗಳ ಕುಟುಂಬ. ನಮ್ಮ ಕುಟುಂಬ ಸಹ ರಾಜಕಾರಣ ಹೊರತಾಗಿ ಇಲ್ಲ. ನಮ್ಮ ತಂದೆಯವರು ಇದ್ದಾಗ ರಾಜಕಾರಣಿಗಳೇ ಮನೆಗೆ ಬರುತ್ತಿದ್ದರು. ಗೀತಾ ಶಿವರಾಜ್ ಕುಮಾರ್ ರ ಚುನಾವಣೆ ಸಿದ್ಧತೆ ಕೂಡ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಎರಡು ಸಿಎಂ ಫ್ಯಾಮಿಲಿಗಳ ನಡುವೆ ಚುನಾವಣೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ ಎಂದರು.

ವಿಜಯ ಯಾತ್ರೆ:

ಇನ್ನು ಕರಟಕ ದಮನಕ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದಿಂದ ಅದೇ ಮಾರ್ಗವಾಗಿ ತ್ರಿನೇತ್ರ ಚಿತ್ರಮಂದಿರದವರೆಗೆ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಾನು ಪ್ರಭುದೇವ ನಟಿಸಿರುವ ಕರಟಕ ದಮನಕ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಖುಷಿ ತಂದಿದೆ. ಪ್ರಭುದೇವ ಅವರ ಜೊತೆ ನೃತ್ಯ ಮಾಡಿದ್ದು ತುಂಬಾನೇ ಖುಷಿ ಕೊಟ್ಟಿದೆಯಲ್ಲದೇ, ಹೊಸ ಅನುಭವವಾಗಿದೆ ಎಂದು ಹೇಳಿದರು.

ನಿರ್ದೇಶಕ ಯೋಗರಾಜ ಭಟ್ಟರ ಶ್ರಮವೂ ಇದೆ. ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರವು ಅಭಿಮಾನಿಗಳಿಗೆ ಇಷ್ಟವಾಗಿದೆ. ತುಂಬಿದ ಪ್ರದರ್ಶನ ಕಾಣುತ್ತಿದ್ದು, ಇದು ಎಲ್ಲರಿಗೂ ಸಂತಸ ತಂದಿದೆ ಎಂದರು.

Exit mobile version