SUDDIKSHANA KANNADA NEWS/ DAVANAGERE/ DATE:03-11-2024
ಬೆಂಗಳೂರು: ನಟ, ನಿರ್ದೇಶಕ, ಸ್ಯಾಂಡಲ್ ವುಡ್ ನ ವಿನೂತನ ಡೈರೆಕ್ಟರ್ ಎಂದೇ ಖ್ಯಾತಿಗಳಿಸಿದ್ದ ಗುರುಪ್ರಸಾದ್ ಬಗ್ಗೆ ನಟ, ನವರಸ ನಾಯಕ ಜಗ್ಗೇಶ್ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗುರುಪ್ರಸಾದ್ ಮೊದಲು ನನ್ನ ಬಳಿ ಬಂದಾಗ ನಾಲ್ಕು ಪುಸ್ತಕಗಳು ಕೈಲ್ಲಿ ಇರುತ್ತಿದ್ದವು. ಆದ್ರೆ, ಬರಬರುತ್ತಾ ಆರು ಮದ್ಯದ ಬಾಟಲಿಗಳು ಕೈಲ್ಲಿರುತ್ತಿದ್ದವು. ಮಠ, ಎದ್ದೇಳು ಮಂಜುನಾಥ ಸಿನಿಮಾ ಮಾಡುವಾಗ ಉತ್ತಮವಾಗಿಯೇ ಇದ್ದರು. ಎದ್ದೇಳು ಮಂಜುನಾಥ ಸಿನಿಮಾ ಕ್ಲೈಮ್ಯಾಕ್ಸ್ ಸೀನ್ ನಲ್ಲಿ ಮಗಳಿಗೋಸ್ಕರ ಕುಡಿತ ಬಿಡಬೇಕೆಂಬ ಸೀನ್ ಇತ್ತು. ಆಗ ಗುರುಪ್ರಸಾದ್ ಮಾಡಿದ್ದ ವರ್ತನೆ ಅಚ್ಚರಿ ತಂದಿತ್ತು ಎಂದಿದ್ದಾರೆ.
ಗುರುಪ್ರಸಾದ್ ಇಗೋ ಮತ್ತು ನನ್ನ ಮಾತೇ ನಡೆಯಬೇಕು ಎಂಬ ಹಠಮಾರಿ ಡೈರೆಕ್ಟರ್ ಆಗಿದ್ದರು. ಸಹವಾಸದಿಂದ ಗುರುಪ್ರಸಾದ್ ಕೆಟ್ಟು ಹೋಗಿದ್ದರು. ವರ್ತನೆಯೇ ಬದಲಾಗಿತ್ತು. ಒಮ್ಮೆ ಅವರ ಮನೆಗೆ ಹೋದ ಮನೆ ತುಂಬೆಲ್ಲಾ ಮದ್ಯದ ಬಾಟೆಲ್ ಗಳು ಬಿದ್ದಿದ್ದವು. ನಾನೇ ಒಂದು ಸಿನಿಮಾ ಮಾಡಿದ್ದೆ. 90 ನಿಮಿಷ ಇತ್ತು. ಸಿನಿಮಾವು ಐದಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ನಿರ್ಮಾಪಕರು 90 ಲಕ್ಷ ರೂಪಾಯಿ ನೀಡಿದ್ದರೂ ಸರಿಯಾಗಿ ಸಿನಿಮಾ ನಿರ್ದೇಶನ ಮಾಡಲಿಲ್ಲ. ಇದರಿಂದ ನನಗೂ ಬೇಸರವಾಯಿತು ಎಂದು ತಿಳಿಸಿದರು.
ಗುರುಪ್ರಸಾದ್ ಅವರು, ಮದ್ಯದ ಚಟಕ್ಕೆ ದಾಸರಾಗಿದ್ದರು. ಒಳ್ಳೆಯ ಬರವಣಿಗೆಯ ತಾಕತ್ ಇದ್ದ ವ್ಯಕ್ತಿ. ಹಲವು ಬಾರಿ ನಾನೇ ಗುರುಪ್ರಸಾದ್ ಗೆ ಬುದ್ದಿವಾದ ಹೇಳಿದ್ದೆ. ಮೊದಲ ಪತ್ನಿ ತುಂಬಾ ಸಹಾಯ ಮಾಡಿದರು. ಒಳ್ಳೆಯ ಹೆಣ್ಣು ಮಗಳು. ಅವರ ಜೊತೆಗೂ ಚೆನ್ನಾಗಿ ಬಾಳಲಿಲ್ಲ.ಇನ್ನು ಎರಡನೇ ಮದುವೆಯಾಗಿದ್ದ. ಆಕೆಯೊಂದಿಗೆ ಚೆನ್ನಾಗಿ ಬದುಕಲಿಲ್ಲ. ನನಗೆ ಪ್ರೆಸ್ ಮೀಟ್ ನಲ್ಲಿ ಅವಮಾನ ಮಾಡಿದ್ದ. ನನಗೆ ಮಸಿ ಬಳಿದಿದ್ದ ಎಂದು ಬೇಸರ ತೋಡಿಕೊಂಡರು.
ನಾನೇನೂ ಮಾಡುತ್ತೇನೆ ಅದನ್ನು ಜನರು ನೋಡುತ್ತಾರೆ ಎಂದು ಭಾವಿಸಿದ್ದ. ಎದ್ದೇಳು ಮಂಜುನಾಥ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಬಂದಿತ್ತು. ಮಠ, ಎದ್ದೇಳು ಮಂಜುನಾಥ ಸಿನಿಮಾ ಮಾಡುವಾಗ ಚೆನ್ನಾಗಿಯೇ ಇದ್ದ. ಆತನ ಜೊತೆಗಿದ್ದವರು ಇಂದು ಇಲ್ಲ. ಗುರುಪ್ರಸಾದ್ ರನ್ನು ಕೆಲವರು ದಾರಿ ತಪ್ಪಿಸಿದರು. ನನಗೆ ದೊಡ್ಡ ಅಭಿಮಾನಿಯಾಗಿದ್ದ. ಗುರೂಜಿ ನಿಮಗೆ ಎಷ್ಟೇ ವಯಸ್ಸಾಗಿದ್ದರೂ ಫಿಟ್ ಆಗಿರಿ. ಮುದುಕರ ಪಾತ್ರ ಮಾಡಬೇಡಿ. ನಾನು ನಿಮಗೆ ಕಥೆ ಬರೆಯುತ್ತೇನೆ ಎಂದು ಹೇಳುತ್ತಿದ್ದ. ಆತ ಆತ್ಮಹತ್ಯೆ ಮಾಡಿಕೊಂಡಿದ್ದು ಬೇಸರ ತಂದಿದೆ. ಆತನಿಗೆ ಸಣ್ಣ ಮಗು. ಕೇವಲ ಮೂರು ವರ್ಷ ಅಷ್ಟೇ. ಆತ್ಮಹತ್ಯೆ ಮಾಡಿಕೊಂಡಿದ್ದು ತುಂಬಾ ಮನಸ್ಸಿಗೆ ಬೇಸರ ತಂದಿದೆ ಎಂದು ತಿಳಿಸಿದರು.
ರಾಘವೇಂದ್ರ ಸ್ವಾಮಿಗಳ ಬಳಿ ಕರೆದುಕೊಂಡು ಹೋಗುತ್ತೇನೆ, ಬಾ ಎಂದರೆ ಗುರುಪ್ರಸಾದ್ ನನಗೆ ಗೇಲಿ ಮಾಡುತ್ತಿದ್ದ. ಆತ ಉಡಾಫೆ ಮಾತನಾಡುತ್ತಿದ್ದ. ಆಗ ನನಗೆ ಕಣ್ಣಲ್ಲಿ ನೀರು ಬರುತಿತ್ತು. ತುಂಬಾನೇ ಅಹಂ ಇದ್ದ ಕಾರಣ ಹೆಚ್ಚು ಬೆಳೆಯಲೇ ಇಲ್ಲ. ಬಾಲ್ಯಾವಸ್ಥೆಯಲ್ಲಿ ರಕ್ಷಣೆ ಮಾಡಿದಾಗ ಕಂಟ್ರೋಲ್ ನಲ್ಲಿ ಬೆಳೆಸಬೇಕು. ಅದು ತಂದೆ ತಾಯಿಯ ಕರ್ತವ್ಯ, ಅವನನ್ನು ಫ್ರೀ ಬಿಟ್ಟಿಬಿಟ್ಟಿದ್ದಾರೆ. ಆತನ ತಾಯಿಯೇ ಹೇಳಿದ್ದರು. ನೂರು ಮಕ್ಕಳನ್ನು ಕಂಟ್ರೋಲ್ ಮಾಡಬಹುದು. ಗುರುಪ್ರಸಾದ್ ನಿಯಂತ್ರಣ ಮಾಡಲು ಆಗದು ಎಂದು ಆತನ ತಾಯಿಯೇ ಹೇಳಿದ್ದರು. ಗುರುಪ್ರಸಾದ್ ಒಳ್ಳೆಯ ಡೈರೆಕ್ಟರ್, ಸಂಭಾಷಣೆಕಾರ, ಬರಹಗಾರ ಎಂದು ನೆನಪು ಮಾಡಿಕೊಂಡರು.