Site icon Kannada News-suddikshana

ಅಡಿಕೆ ಕೊಯ್ಲು ಮುಗಿಸಿ ವಾಪಸ್ ಬರುವಾಗ ಬೊಲೊರೊ ಪಲ್ಟಿ: ಮೂವರ ಸಾವು, 6 ಮಂದಿಗೆ ಗಾಯ

SUDDIKSHANA KANNADA NEWS/ DAVANAGERE/ DATE:15-01-2024

ದಾವಣಗೆರೆ: ಬೊಲೊರೊ ಪಲ್ಟಿಯಾದ ಪರಿಣಾಮ ಮೂವರು ಮೃತಪಟ್ಟು 6 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹೊನ್ನಾಳಿ – ನ್ಯಾಮತಿ ತಾಲೂಕಿನ ಸವಳಂಗ ಸಮೀಪದ ಶಿವಮೊಗ್ಗ – ಶಿಕಾರಿಪುರ ರಸ್ತೆಯ ಚಿನ್ನಿಕಟ್ಟೆ ಗ್ರಾಮದಲ್ಲಿ ಸಂಭವಿಸಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಚಂದನಕೆರೆ ಗ್ರಾಮದ ನಾಗರಾಜ್ (39), ಮಂಜುನಾಥ (45) ಅವರು ಶಿವಮೊಗ್ಗ ಆಸ್ಪತ್ರೆಯಲ್ಲಿ ಹಾಗೂ ಮಂಗಳೂರಿನ ಆಸ್ಪತ್ರೆಯಲ್ಲಿ ಗೌತಮ್ (16) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಶಿಕಾರಿಪುರ ತಾಲೂಕಿನ ಅರಿಷಿನಗೆರೆ ಗ್ರಾಮದಲ್ಲಿ ಅಡಿಕೆ ಕೊಯ್ಲು ಮುಗಿಸಿ ಬೊಲೊರೊ ವಾಹನದಲ್ಲಿ ಚಂದನಕೆರೆ ಗ್ರಾಮದವರಾದ ವೆಂಕಟೇಶ್, ಮಂಜುನಾಥ, ನಾಗರಾಜ್, ಗೌತಮ್, ವಿಜಯಪ್ಪ, ಉಲ್ಲಾಸ, ಗಣೇಶ, ಸುರೇಶಪ್ಪ ಅವರು ವಾಪಸ್ ಊರಿಗೆ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ವಾಹನದ ಕ್ಯಾಬಿನ್ ನಲ್ಲಿ ಕುಳಿತಿದ್ದ ವೆಂಕಟೇಶ, ಉಲ್ಲಾಸ ಮತ್ತು ಚಾಲಕ ಪ್ರದೀಪ್ ನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಮಂಜುನಾಥ, ನಾಗರಾಜ್ ಮತ್ತು ಗೌತಮ್ ಅವರು ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಸಾವು ಕಂಡಿದ್ದಾರೆ.

ವಿಜಯಪ್ಪ, ಸುರೇಶ ಮತ್ತು ಗಣೇಶ ಅವರಿಗೆ ತೀವ್ರ ಗಾಯಗಳಾಗಿದ್ದು, ಅಪಘಾತಕ್ಕೆ ಕಾರಣನಾದ ಚಾಲಕನ ಪ್ರದೀಪನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗಾಯಾಳು ವೆಂಕಟೇಶ್ ಅವರು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಇನ್ ಸ್ಪೆಕ್ಟರ್ ಎನ್. ಎಸ್. ರವಿ ತನಿಖೆ ಮುಂದುವರಿಸಿದ್ದಾರೆ.

Exit mobile version