Site icon Kannada News-suddikshana

ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್‌ ; 6 ಮಂದಿಗೆ ಗಾಯ

ನೆಲಮಂಗಲ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಹೆದ್ದಾರಿಯ ಪಕ್ಕದ ರಸ್ತೆಗೆ ಹಾರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಅಡಕಮಾರನಹಳ್ಳಿಯ ತುಮಕೂರು ರಸ್ತೆ ಮಾದಾವರ ಫ್ಲೈಓವರ್ ಬಳಿ ನಡೆದಿದೆ. ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಸಮೀಪ ಬಂದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು, ಹೆದ್ದಾರಿಯ ತಡೆಗೋಡೆಯನ್ನು ಹಾರಿ ಪಕ್ಕದ ರಸ್ತೆಗೆ ಬಂದು ನಿಂತಿದೆ.

ಈ ಘಟನೆ 40 ಅಡಿ ಎತ್ತರದ ಫ್ಲೈಓವರ್‌ನಲ್ಲಿ ನಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಒಂದು ವೇಳೆ ಬಸ್‌ ಏನಾದರೂ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರೆ, ಪ್ರಯಾಣಿಕರ ಜೀವಕ್ಕೆ ಕುತ್ತು ಬರುತ್ತಿತ್ತು. ಮಾತ್ರವಲ್ಲದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರು ಪ್ರಾಣವನ್ನೇ ಕಳೆದುಕೊಳ್ಳಬೇಕಿತ್ತು. ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಚಾಲಕ ನಿರ್ವಾಹಕ ಸೇರಿದಂತೆ ಆರು ಮಂದಿಗೆ ಗಾಯವಾಗಿದ್ದು, ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version