ಮುಂಬೈ: ತಮಗೆ ತಗುಲಿರುವ ‘ಲವ್ ಜಿಹಾದ್’ ಆರೋಪಗಳನ್ನು ಬಾಲಿವುಡ್ ನಟ ಆಮಿರ್ ಖಾನ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇತ್ತೀಚೆಗಷ್ಟೇ ಗೌರಿ ಪ್ರಾಟ್ (Gauri Spratt) ಅವರೊಂದಿಗೆ ಮುಂಬೈನಲ್ಲಿ ಸರಳವಾಗಿ ಮೂರನೇ ವಿವಾಹವಾದ ಬೆನ್ನಲ್ಲೇ ಕೇಳಿಬಂದಿರುವ ಆರೋಪಗಳಿಗೆ ಆಮಿರ್ ಖಾನ್ ಪ್ರತಿಕ್ರಿಯಿಸಿದ್ದು, ತಮ್ಮ ಯಾವುದೇ ವೈವಾಹಿಕ ಜೀವನದಲ್ಲಿ ಧರ್ಮ ಮತಾಂತರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರೆಡಿಫ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಮಿರ್ ಖಾನ್, “ನಮ್ಮದು ಅತ್ಯಂತ ಅಂತರ್ಗತ (inclusive) ಕುಟುಂಬವಾಗಿದೆ. ನನ್ನ ಇಬ್ಬರು ಸಹೋದರಿಯರು ಹಿಂದೂಗಳನ್ನು ವಿವಾಹವಾಗಿದ್ದಾರೆ, ನನ್ನ ಮಗಳು ಐರಾ ಕೂಡ ಹಿಂದೂ ಯುವಕನನ್ನು ವರಿಸಿದ್ದಾಳೆ. ನನ್ನ ಸೋದರಸಂಬಂಧಿ ಮನ್ಸೂರ್ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದಾರೆ. ಇವೆಲ್ಲವೂ ನಾಗರಿಕ ವಿವಾಹಗಳಾಗಿದ್ದು (Civil Marriages), ಇಲ್ಲಿ ಧರ್ಮ ಮತಾಂತರದ ಪ್ರಶ್ನೆಯೇ ಬಂದಿಲ್ಲ” ಎಂದಿದ್ದಾರೆ.
ತಮ್ಮ ಪತ್ನಿಯರ ಬಗ್ಗೆ ಮಾತನಾಡಿದ ಅವರು, “ನನ್ನ ಮೊದಲ ಪತ್ನಿ ರೀನಾ ದತ್ತಾ, ಎರಡನೇ ಪತ್ನಿ ಕಿರಣ್ ರಾವ್ ಅಥವಾ ಈಗಿನ ಪತ್ನಿ ಗೌರಿ ಯಾರೂ ಕೂಡ ಮದುವೆಗಾಗಿ ಧರ್ಮ ಬದಲಾಯಿಸಿಲ್ಲ. ಗೌರಿ ಹಿಂದೂ ಕೂಡ ಅಲ್ಲ, ಆಕೆ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವಳು. ಕಾಲ ಕಳೆದಂತೆ ಜೀವನ ಹೆಚ್ಚು ಹಾಸ್ಯಾಸ್ಪದವಾಗುತ್ತಿದೆ” ಎಂದು ಲವ್ ಜಿಹಾದ್ ಆರೋಪಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ. ಜುಲೈ 5 ರಂದು ಆಮಿರ್ ಖಾನ್ ಹಾಗೂ ಗೌರಿ ಪ್ರಾಟ್ ಅವರ ವಿವಾಹ ಕೇವಲ 150 ಆಪ್ತರ ಸಮ್ಮುಖದಲ್ಲಿ ನಡೆದಿತ್ತು.





Leave a comment