Site icon Kannada News-suddikshana

ನನಗೆ ಹಾರ ಬೇಡ ಮನೆ ದೇವರಿಗೆ ಅರ್ಪಿಸಿ, ಬೇಗ ಮಗು ಹುಷಾರಾಗಲಿ: ಹಾರ ಹಾಕಲು ಬಂದಿದ್ದ ಪೋಷಕರಿಗೆ ಹೇಳಿ ಸರಳತೆ ಮೆರೆದ ಡಾ. ಪ್ರಭಾ ಮಲ್ಲಿಕಾರ್ಜುನ್

SUDDIKSHANA KANNADA NEWS/ DAVANAGERE/ DATE:28-02-2024

ದಾವಣಗೆರೆ: ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಿದ ಎಸ್. ಎಸ್. ಕೇರ್ ಟ್ರಸ್ಟ್ ನ ಆಜೀವ ಸದಸ್ಯೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೌರವಿಸಲು ದೊಡ್ಡ ಹೂವಿನಹಾರವನ್ನು ಪೋಷಕರು ತಂದಿದ್ದರು. ಹೂವಿನಹಾರ ಹಾಕಿಸಿಕೊಳ್ಳದೆ ಮಗುವಿನ ಆರೋಗ್ಯ ಬೇಗ ಸುಧಾರಿಸಲಿ. ಸಂಜೆ ತಮ್ಮ ಮನೆ ದೇವರಿಗೆ ಅರ್ಪಿಸಿ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳುವ ಮೂಲಕ ಸರಳತೆ ಮೆರೆದರು.

ಇತ್ತೀಚೆಗಷ್ಟೇ ಮಹಾನಗರ ಪಾಲಿಕೆ ವ್ಯಾಪ್ತಿಯ 25ನೇ ವಾರ್ಡ್ ನ ಡಿಸಿಎಂ ಟೌನ್ ಶಿಪ್ ನಲ್ಲಿ ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿದ್ದ ಡಾ.ಪ್ರಭಾ ಮಲ್ಲಿಕಾರ್ಜುನ್ ರವರ ಬಳಿ ಬಂದ ಮಹಿಳೆ ಒಬ್ಬರು ತಮಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಮಗ ಇದ್ದಾನೆ. ಮಗನು ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಇಲ್ಲದಿರುವುದರ ಬಗ್ಗೆ ಹಾಗೂ ಮಗು ಹುಟ್ಟಿದಾಗಲೇ ಆರೋಗ್ಯ ಸಮಸ್ಯೆ ಇದೆ, ಹೆಚ್ಚಿನ ಚಿಕಿತ್ಸೆ ಬೇಕೆಂದು ವೈದ್ಯರು ಸೂಚಿಸಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಚಿಕಿತ್ಸೆ ಕೊಡಿಸಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಮಹಿಳೆ ಅಳಲು ಆಲಿಸಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ವೈದ್ಯರಿಗೆ ಮಗುವಿನ ತಪಾಸಣೆ ನಡೆಸಿ ಅವಶ್ಯವಿರುವ ಚಿಕಿತ್ಸೆ ನೀಡಲು ಸೂಚಿಸಿದ್ದರು. ಅದರಂತೆ ಎಸ್.ಎಸ್ ಹೈಟೆಕ್ ಹಾಸ್ಪಿಟಲ್ ನಲ್ಲಿ ಶಸ್ತ್ರಚಿಕಿತ್ಸೆ ನಡೆದು ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಪೋಷಕರು ಇಂದು ತಮ್ಮ ಮಗುವಿನೊಂದಿಗೆ ಡಾ. ಪ್ರಭಾ ಮಲ್ಲಿಕಾರ್ಜುನ ರವರ ನಿವಾಸಕ್ಕೆ ಬಂದು ಧನ್ಯವಾದ ತಿಳಿಸಿದರು.

ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್ ರವರನ್ನು ಗೌರವಿಸಲು ದೊಡ್ಡ ಹೂವಿನಹಾರ ತಂದಿದ್ದರು. ಪೋಷಕರು ತಂದ ಹೂವಿನಹಾರ ಹಾಕಿಸಿಕೊಳ್ಳದೆ ಮಗುವಿನ ಆರೋಗ್ಯ ಬೇಗ ಸುಧಾರಿಸಲಿ. ಇಂದು ಸಂಜೆ ತಮ್ಮ ಮನೆ ದೇವರಿಗೆ ಅರ್ಪಿಸುವಂತೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದರು. ಪ್ರಭಾ ಮಲ್ಲಿಕಾರ್ಜುನ್ ಅವರ ಈ ಸರಳತೆ ಪೋಷಕರಿಗೆ ಖುಷಿ ತಂದಿತಲ್ಲದೇ, ಧನ್ಯವಾದ ಅರ್ಪಿಸಿದರು. ನಿಮ್ಮ ಸಹಕಾರ, ಆಶೀರ್ವಾದ ಮಗುವಿನ ಮೇಲೆ ಇರಲಿ ಎಂದು ಮನವಿ ಮಾಡಿಕೊಂಡರು.

Exit mobile version