SUDDIKSHANA KANNADA NEWS/ DAVANAGERE/ DATE_08-07_2025
ದಾವಣಗೆರೆ: ದಾವಣಗೆರೆ ಹಾಗೂ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಎಲ್ಲರಲ್ಲಿಯೂ ಇತ್ತು. ಆದ್ರೆ, ಮೀರ್ ಸಾಧಕರು ಬೆನ್ನಿಗೆ ಚೂರಿ ಹಾಕಿದ್ದರಿಂದಲೇ ಸೋಲುಂಟಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೀರ್ ಸಾಧಕರಿಗೆ ಪಾಠ ಕಲಿಸಲೇಬೇಕಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸಿಡಿಗುಂಡು ಸಿಡಿಸಿದರು.
ಈ ಸುದ್ದಿಯನ್ನೂ ಓದಿ: ಬಿ. ಎಸ್. ಯಡಿಯೂರಪ್ಪ ಅಧಿಕಾರಕ್ಕೇರಲು ಸಹಾಯ ಮಾಡಿದ್ದೇಗೆಂದು ಎಳೆ ಎಳೆಯಾಗಿ ಬಿಚ್ಚಿಟ್ಟ ಜಿ.ಎಂ. ಸಿದ್ದೇಶ್ವರ !
ನಗರದ ಅಭಿನವ ರೇಣುಕಾ ಮಂದಿರದಲ್ಲಿ ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದೇಶ್ವರ ಅವರ ಜನುಮದಿನದ ಪ್ರಯುಕ್ತ ಏರ್ಪಡಿಸಿದ್ದ ನಮ್ಮಾಭಿಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದೇ ವೇದಿಕೆಯಲ್ಲಿ ಅವರ ಎದುರು ನಿಂತು ಹೋರಾಟ ಮಾಡುವ ಛಲ ಬೇಕಿದೆ. ಬೆನ್ನಿಗೆ ಚೂರಿ ಹಾಕಿದವರಿಗೆ ಪಾಠ ಕಲಿಸಿ ಬಿಜೆಪಿ ಸರಿದಾರಿಗೆ ತರುತ್ತೇವೆಂಬ ಹಠ ಇಟ್ಟುಕೊಂಡು ಸಿದ್ದೇಶ್ವರ ಅವರು ಮುಂದುವರಿಯುತ್ತಿದ್ದಾರೆ. ವಕ್ಫ್ ವಿರುದ್ಧ ಅರವಿಂದ ಲಿಂಬಾವಳಿ, ಸಿದ್ದೇಶ್ವರ, ಬಿ. ಪಿ. ಹರೀಶ್ ಸೇರಿದಂತೆ ಹಲವು ಹೋರಾಟ ಮಾಡಿದರು ಎಂದು ಹೇಳಿದರು.
ರಕ್ತದ ಕಣಕಣದಲ್ಲಿಯೂ ಹೋರಾಟ ರೂಢಿ ಮಾಡಿಕೊಂಡವರು. ತೀರ್ಮಾನ ತೆಗೆದುಕೊಂಡರೇ ಸಾಧಿಸಿಯೇ ತೀರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಬಂದಾಗ ಗಾಯಿತ್ರಿ ಸಿದ್ದೇಶ್ವರ ಅವರೂ ಬಂದಿದ್ದರು. ಬಹಳಷ್ಟು ದೊಡ್ಡ ಸಭೆ ಆಗಿತ್ತು. ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಸಮಾರಂಭ ನೋಡಿದಾಗ ವಿಶ್ವಾಸ ಇತ್ತು. ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಅಚಲವಾದ ನಂಬಿಕೆ ಇತ್ತು. ಆದ್ರೆ, ಮೀರ್ ಸಾಧಕರು ಮೋಸ ಮಾಡಿದರು ಎಂದು ಕಿಡಿಕಾರಿದರು.
ಸಿದ್ದೇಶ್ವರ ಸಾಧನೆ, ಕೊಡುಗೆಗಳ ನೆನಪು ಮಾಡಿಕೊಂಡು ಜನುಮದಿನ ಆಚರಿಸುತ್ತಿದ್ದೇವೆ. ನಮಗೂ ದಾವಣಗೆರೆಗೂ ಅವಿನಾಭಾವ ಸಂಬಂಧ ಇದೆ. ನಮ್ಮಪ್ಪನವರು ಬಂಗಾರಪ್ಪನವರು ಓದಲು ಬಂದವರು. ಹೈಸ್ಕೂಲ್ ಮುಗಿಸಿ ಇಲ್ಲಿಗೆ ಬಂದು ದಾವಣಗೆರೆಯ ಮಂಡಕ್ಕಿ, ಮಿರ್ಚಿ ಸವಿಯುತ್ತಿದ್ದರು. ನಮಗೆ ತೋರಿಸುವವರು. ಇಂಥ ಮನೆಯಲ್ಲಿ ಇದ್ದೆ, ಸ್ನೇಹಿತರಿದ್ದಾರೆ ಎಂದು. ಕರ್ನಾಟಕದ ಕೇಂದ್ರಿತವಾಗಿರುವ ಶಕ್ತಿ ದಾವಣಗೆರೆ. ಕರ್ನಾಟಕ ಒಗ್ಗೂಡಿಸಲು ದಾವಣಗೆರೆಯಲ್ಲಿ ಕಾರ್ಯಕ್ರಮ ಮಾಡ್ತಾರೆ. ರಾಜಧಾನಿ ಆಗಬೇಕೆಂಬ ಹೋರಾಟವೂ ನಡೆದಿತ್ತು. ತದನಂತರ ಬೆಂಗಳೂರು ಆಯ್ತು. ತಂದೆ ಕೆಸಿಪಿ ಪಾರ್ಟಿ ಕಟ್ಟಿದಾಗ ಇಡೀ ದಾವಣಗೆರೆ ಜಿಲ್ಲೆ ಬೆಂಬಲ ವ್ಯಕ್ತಪಡಿಸಿತ್ತು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗದ ಏಕೀಕರಣ ಮಾಡಲು ದಾವಣಗೆರೆಗೆ ಬರುತ್ತಾರೆ. ಇಂಥ ಜಾಗದಲ್ಲಿ ರಾಜಕಾರಣದ ಧ್ರುವೀಕರಣ ಆಗಬೇಕಾದರೆ ಸಿದ್ದೇಶ್ವರ ಮೂಲಕ ಆಗಬೇಕು ಎಂದು ಹೇಳಿದರು.
ತಂದೆ ಬಂಗಾರಪ್ಪರು ಒಮ್ಮೆ ಸೋತಾಗ ತುಂಬಾನೇ ಬೇಸರವಾಗಿದ್ದರು. ಯಾಕೆಂದರೆ ಸೋಲಿಲ್ಲದ ಸರದಾರ ಎನಿಸಿಕೊಂಡವರು. ಕೇವಲ ಒಂದು ವರ್ಷದಲ್ಲಿ ಮತ್ತೆ ಓಡಾಡಿ ಗೆದ್ದು ಬಂದರು. ಸೋಲು ಎನ್ನೋದು ಪಾಠ ಕಲಿಸುವಂಥದ್ದು. ಕಲಿಯಲೇಬೇಕು. ಜನರು ಕೊಟ್ಟ ತೀರ್ಪಿಗೆ ಮನ್ನಣೆ ನೀಡಬೇಕು. ಯಾರ್ಯಾರು ಶಿಕ್ಷೆ ಕೊಟ್ಟಿದ್ದಾರೆ ಅದನ್ನು ಅನುಭವಿಸಲೇಬೇಕು. ಕರ್ನಾಟಕದ ರಾಜಕಾರಣ ವಿಶ್ಲೇಷಣೆ ಮಾಡಲು ಸೇರುತ್ತಾ ಇರುತ್ತೇವೆ. ಬಿಜೆಪಿ ಬಾವುಟವನ್ನು ಕರ್ನಾಟಕದಲ್ಲಿ 2028ರಲ್ಲಿ ಹಾರಿಸಲು ರಾಜಕೀಯ ಸಂಘಟನೆ ಶುರುವಾಗಿದೆ. ಡಂಗುರ ಆರಂಭವಾಗಿದೆ ಎಂದರು.
ಪಕ್ಷದ ಆದೇಶಕ್ಕೆ ದೊಡ್ಡವರಲ್ಲ. ಪಕ್ಷದ ಆದೇಶ ಪಾಲನೆ ಮಾಡಿದ್ದೇವೆ, ಪಾಲನೆ ಮಾಡುತ್ತಿದ್ದೇವೆ. ಪಕ್ಷದ ಆದೇಶದ ವಿರುದ್ಧ ಹೋಗಲ್ಲ. ಕಾಂಗ್ರೆಸ್ ಆಡಳಿತ ನೋಡಿದರೆ ಎಲ್ಲರಿಗೂ ಕರ್ನಾಟಕ ದಿಕ್ಕು ತಪ್ಪಿ ಹೋಗಿದೆ. ಯಾವ್ಯಾವ ಹಂತಕ್ಕೋ ಹೋಗಿದೆ. ಈ ಸಭೆ ಸೇರಿದ್ದೀರಿ. ಜನುಮದಿನದ ಪ್ರಯುಕ್ತ ಸೇರಿದ್ದರೆ ದಾವಣಗೆರೆಯಿಂದ ಬಿಜೆಪಿ ತೆಕ್ಕೆಗೆ ತಂದುಕೊಳ್ಳುವುದು ನಿಶ್ಚಿತ. ರಾಜಕೀಯ ಧ್ರುವೀಕರಣಕ್ಕೆ ಈ ಸಮಾರಂಭ ಸಾಕ್ಷಿಯಾಗಲಿದೆ ಎಂದು ಕುಮಾರ ಬಂಗಾರಪ್ಪ ಹೇಳಿದರು.