Site icon Kannada News-suddikshana

ಕಸದ ರಾಶಿಗೆ ಬಿದ್ದ ಬೆಂಕಿ: 112 ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿತು ದೊಡ್ಡ ಅನಾಹುತ!

SUDDIKSHANA KANNADA NEWS/ DAVANAGERE/ DATE:15-01-2025

ದಾವಣಗೆರೆ: ನಗರದ ಹದಡಿ ರಸ್ತೆಯ ಯುಬಿಡಿಟಿ ಕಾಲೇಜ್ ಎದುರಿನ ಪಂಚದೇವಸ್ಥಾನದ ಪಕ್ಕದ ಕಸದ ರಾಶಿಗೆ ಯಾರೋ ಕಿಡಿಗೇಡಿಗಳು ಹಚ್ಚಿದ ಬೆಂಕಿ ದೊಡ್ಡ ಅನಾಹುತವನ್ನೇ ಸೃಷ್ಟಿಸಲಿತ್ತು. ಆದ್ರೆ, 112 ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದೆ.

ಕಸದ ರಾಶಿಗೆ ಬೆಂಕಿ ಬಿದ್ದ ವಿಚಾರವನ್ನು 112 ಸಿಬ್ಬಂದಿಗೆ ಮಾಹಿತಿ ನೀಡಿದಾಕ್ಷಣ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಕಾನ್ ಸ್ಟೇಬಲ್ ಚೇತನ್ ಕುಮಾರ್ ಹಾಗೂ ದಫೇದಾರ್ ಗುಡದೇಶ್ ಅವರು ಕೂಡಲೇ ಸ್ಛಳಕ್ಕೆ ಬಂದು ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದರು.

ಬೆಂಕಿ ಹೆಚ್ಚಾಗುತ್ತಿದ್ದು, ಕೂಡಲೇ ಆಗಮಿಸುವಂತೆ 112ಗೆ ಕರೆ ಬಂದಿದೆ. ಈ ಕರೆ ನಿರ್ಲಕ್ಷ್ಯ ವಹಿಸದೇ ಸಮಯಪ್ರಜ್ಞೆ ಮೆರೆದರು. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಫೋನ್ ಮಾಡಿ ಸ್ಥಳಕ್ಕೆ ಧಾವಿಸಿದರು. ರಸ್ತೆ ಪಕ್ಕದಲ್ಲಿ ಕಟ್ಟಿದ್ದ ಕಟ್ಟಿಗೆಯ ತಡೆಗೋಡೆಗೂ ಬೆಂಕಿ ಆವರಿಸಿಕೊಂಡಿತ್ತು. ಇನ್ನೇನು ಪಕ್ಕದಲ್ಲೇ ಇದ್ದ ಹುಲ್ಲಿನ ಬಣವೆ ಹಾಗೂ ವಿದ್ಯುತ್‌ನ ದೊಡ್ಡ ಟ್ರಾನ್ಸ್ ಫಾರಂಗೂ ತಗುಲುವ ಆತಂಕ ಇತ್ತು. ಅಗ್ನಿಶಾಮಕ ದಳಕ್ಕೆ ಕಾಯದೇ ತಕ್ಷಣ ಕಾರ್ಯಪ್ರವೃತ್ತರಾಗಿ ದೇವಸ್ಥಾನದ ಆವರಣದಲ್ಲಿದ್ದ ನೀರಿನ ಟ್ಯಾಂಕ್‌ನಲ್ಲಿನ ನೀರನ್ನು ಅಲ್ಲಿಯೇ ಇದ್ದ ಬಕೆಟ್‌ಗಳಲ್ಲಿ ತಂದು ಹಾಕುವುದರ ಮೂಲಕ ಬೆಂಕಿ ನಂದಿಸಿದ್ದಾರೆ. ಬಳಿಕ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಯವರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ದೇವಸ್ಥಾನದವರ ಗಮನಕ್ಕೂ ತಂದಿದ್ದಾರೆ. ಆಗಬಹುದಾಗಿದ್ದ ದೊಡ್ಡ ಅನಾವುತವೊಂದನ್ನು ತಪ್ಪಿಸಿದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Exit mobile version