ದಾವಣಗೆರೆ/ಬೆಂಗಳೂರು: ಒಂದು ಅಡಿಕೆ ಮರ ಬೆಳೆದು ಫಸಲು ನೀಡಲು ವರ್ಷಗಳೇ ಬೇಕು. ಅಂತಹ ಮರವನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡಿಕೊಳ್ಳಲು ರೈತ ಪ್ರತಿವರ್ಷ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾನೆ. ಬಿಸಿಲು, ಮಳೆ, ರೋಗರುಜಿನಗಳು ಮತ್ತು ಕಾರ್ಮಿಕರ ಸಮಸ್ಯೆಯನ್ನು ಎದುರಿಸಿ ಕೊನೆಗೆ ಫಸಲು ಕೈಗೆ ಬಂದಾಗ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗದಿದ್ದರೆ ಆ ರೈತನ ಬದುಕು ಅಧೋಗತಿಗೆ ಇಳಿಯುತ್ತದೆ. ಇಂದು ಕರ್ನಾಟಕದ ಅಡಿಕೆ ಬೆಳೆಗಾರರ ಮನಸ್ಸಿನಲ್ಲಿ ಅಂತಹದ್ದೇ ಆತಂಕದ ಕತ್ತಲು ಕವಿದಿದೆ.

ಉತ್ಪಾದನಾ ವೆಚ್ಚ ಗಗನಕ್ಕೇರುತ್ತಿರುವ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಬೇಡಿಕೆಯ ಅನಿಶ್ಚಿತತೆ ಕಾಡುತ್ತಿದ್ದು, ಇದರ ಜೊತೆಗೆ ವಿದೇಶಗಳಿಂದ ಅಕ್ರಮವಾಗಿ ಅಡಿಕೆ ದೇಶದ ಮಾರುಕಟ್ಟೆ ಪ್ರವೇಶಿಸುತ್ತಿದೆ ಎಂಬ ಗಂಭೀರ ಆರೋಪಗಳು ರೈತರ ನಿದ್ದೆಗೆಡಿಸಿವೆ.
ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮಾರ್ಗವಾಗಿ ನಡೆಯುತ್ತಿರುವ ಅಕ್ರಮ ಅಡಿಕೆ ಆಮದು ಕರ್ನಾಟಕದ ರೈತರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳು: ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಮೇಲಿನ ನಿಯಂತ್ರಣದ ಆತಂಕ, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯಬಹುದು ಎಂಬ ಭೀತಿಯಿಂದ ವ್ಯಾಪಾರಿಗಳು ಖರೀದಿಯನ್ನು ಮುಂದೂಡುತ್ತಿರುವುದು ಹಾಗೂ ಮಾರುಕಟ್ಟೆಯಲ್ಲಿ ದಾಸ್ತಾನು ಹೆಚ್ಚಾಗಿರುವುದು ಅಡಿಕೆ ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.
ಡಿಆರ್ಐ ವರದಿಯ ಸ್ಫೋಟಕ ಮಾಹಿತಿ: ಕಂದಾಯ ಗುಪ್ತಚರ ನಿರ್ದೇಶನಾಲಯದ ವರದಿಯ ಪ್ರಕಾರ, 2024-25ರಲ್ಲೇ ಡಿಆರ್ಐ ಅಧಿಕಾರಿಗಳು 27 ಪ್ರಕರಣಗಳಲ್ಲಿ ಒಟ್ಟು 4,613 ಮೆಟ್ರಿಕ್ ಟನ್ ಅಡಿಕೆಯನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಬರೋಬ್ಬರಿ ₹234 ಕೋಟಿಗೂ ಅಧಿಕವಾಗಿದೆ.
ಅಕ್ರಮ ಆಮದಿನ ಕರಾಳ ಜಾಲ: ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಮಲೇಷ್ಯಾದಿಂದ ತರಲಾಗುವ ಅಡಿಕೆಯನ್ನು ಬಾಂಗ್ಲಾದೇಶ ಮೂಲದ್ದೆಂದು ಸುಳ್ಳು ಘೋಷಿಸಿ SAFTA ಸುಂಕ ವಿನಾಯಿತಿ ಪಡೆಯಲಾಗುತ್ತಿದೆ. ಮೂಲ ದೇಶದ ಗುರುತನ್ನು ಮರೆಮಾಚುವ ಈ ಕಳ್ಳಸಾಗಣೆ ಜಾಲದಿಂದ ಸರ್ಕಾರಕ್ಕೆ ₹2,500 ಕೋಟಿಗೂ ಅಧಿಕ ಸುಂಕ ನಷ್ಟವಾಗಿದ್ದು, ಇದು ಪರೋಕ್ಷವಾಗಿ ದೇಶೀಯ ರೈತರ ಕುತ್ತಿಗೆಗೆ ಹಗ್ಗವಾಗಿದೆ.
ವಿದೇಶಿ ಅಕ್ರಮ ಅಡಿಕೆಯ ಪ್ರವಾಹದಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಈ ಗಂಭೀರ ಸಮಸ್ಯೆಯ ಕುರಿತು ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಡಿಕೆ ಬೆಳೆಗಾರರು ಆಗ್ರಹಿಸಿದ್ದಾರೆ.





