ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೇಮ ಪ್ರಕರಣ ಮುರಿದುಬಿದ್ದ ಆಕ್ರೋಶದಿಂದ ಮಾಜಿ ಪ್ರೇಮಿಯೊಬ್ಬ ತನ್ನ ಜೊತೆಯಿದ್ದಾಗ ತೆಗೆದಿದ್ದ ಯುವತಿಯ ಖಾಸಗಿ ವೀಡಿಯೊಗಳನ್ನು ಬರೋಬ್ಬರಿ 19 ಕ್ಕೂ ಹೆಚ್ಚು ಅಶ್ಲೀಲ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡಿರುವ ಘಟನೆ ನಡೆದಿದೆ.

ಸಂತ್ರಸ್ತ ಯುವತಿ ನವೆಂಬರ್ 25 ರಂದು ಸೆನ್ (CEN) ಪೊಲೀಸ್ ಠಾಣೆಗೆ ದೂರು ನೀದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೂರಿನ ಪ್ರಕಾರ, ಸಂತ್ರಸ್ತೆ ಮತ್ತು ಆರೋಪಿ ಅಕ್ಟೋಬರ್ 2023 ರಿಂದ ಆಗಸ್ಟ್ 2024 ರವರೆಗೆ ಒಟ್ಟಿಗೆ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಈ ವೇಳೆ ಇಬ್ಬರ ಮೊಬೈಲ್ ಫೋನ್‌ಗಳಲ್ಲಿ ಕೆಲವು ಖಾಸಗಿ ವೀಡಿಯೊಗಳು ಸೆರೆಯಾಗಿದ್ದವು. ಬಳಿಕ ಉಂಟಾದ ಭಿನ್ನಾಭಿಪ್ರಾಯದಿಂದಾಗಿ 2024ರ ಆಗಸ್ಟ್‌ನಲ್ಲಿ ಇವರ ಸಂಬಂಧ ಮುರಿದುಬಿದ್ದಿತ್ತು.
ಆ ಸಮಯದಲ್ಲಿ ಆ ವೀಡಿಯೊಗಳನ್ನು ಡಿಲೀಟ್ ಮಾಡುವಂತೆ ಯುವತಿ ಕೇಳಿಕೊಂಡಾಗ, ತಾನು ಎಲ್ಲವನ್ನೂ ಅಳಿಸಿಹಾಕಿರುವುದಾಗಿ ಆರೋಪಿ ಭರವಸೆ ನೀಡಿದ್ದನು.
ಸ್ನೇಹಿತರಿಂದ ವಿಷಯ ಬಹಿರಂಗ: ನವೆಂಬರ್ 6, 2026 ರಂದು ಯುವತಿಯ ಪರಿಚಯಸ್ಥರು ಕೆಲವೊಂದು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಆಕೆಯ ಖಾಸಗಿ ವೀಡಿಯೊಗಳು ಹರಿದಾಡುತ್ತಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪರಿಶೀಲಿಸಿದಾಗ ಸತ್ಯಾಂಶ ಹೊರಬಂದಿದೆ.
ಆರೋಪಿಯ ಒಪ್ಪಿಗೆ ಮತ್ತು ದೂರು ದಾಖಲು: ಈ ಬಗ್ಗೆ ಮಾಜಿ ಪ್ರೇಮಿಯನ್ನು ಪ್ರಶ್ನಿಸಿದಾಗ, ತಾನು ವೀಡಿಯೊಗಳನ್ನು ಅಳಿಸಿಹಾಕಿಲ್ಲ ಎಂಬುದನ್ನು ಆತ ಒಪ್ಪಿಕೊಂಡಿದ್ದಾನೆ. ನೊಂದ ಯುವತಿ ವೀಡಿಯೊಗಳು ಹರಿದಾಡುತ್ತಿರುವ 19 ವೆಬ್‌ಸೈಟ್‌ಗಳ ಲಿಂಕ್‌ಗಳೊಂದಿಗೆ ದಕ್ಷಿಣ ವಿಭಾಗದ ಸೆನ್ (CEN) ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಸೈಬರ್ ಅಪರಾಧ ಮತ್ತು ಗೌಪ್ಯತೆ ಉಲ್ಲಂಘನೆ: ಅನುಮತಿಯಿಲ್ಲದೆ ವೈಯಕ್ತಿಕ ಹಾಗೂ ಖಾಸಗಿ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ಪೋರ್ನ್ ಸೈಟ್‌ಗಳಿಗೆ ಹಂಚುವುದು ಗಂಭೀರ ಸ್ವರೂಪದ ಸೈಬರ್ ಅಪರಾಧವಾಗಿದ್ದು, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.
ಸಂಬಂಧ ಮುರಿದು ಬಿದ್ದ ಸಂದರ್ಭದಲ್ಲಿ ಮಹಿಳೆಯರ ವೈಯಕ್ತಿಕ ಗೌಪ್ಯತೆಗೆ ಧಕ್ಕೆ ತರುವ ಇಂತಹ ಕೃತ್ಯಗಳು ಸಮಾಜದಲ್ಲಿ ಹೆಚ್ಚುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.





