
ರೋಪರ್: ಮಾಜಿ ಸ್ಫೋಟಕ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಪುತ್ರರು ಕ್ರಿಕೆಟ್ ಅಂಗಳದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ. ಪಂಜಾಬ್ ವಿರುದ್ಧದ ಕೂಚ್ ಬೆಹರ್ ಟ್ರೋಫಿ (Cooch Behar Trophy) ಅಂಡರ್-19 ನಾಲ್ಕು ದಿನಗಳ ರೇಲ್-ಬಾಲ್ ಪಂದ್ಯದ ಮೊದಲ ದಿನವೇ ಸೆಹ್ವಾಗ್ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್ ತಮ್ಮ ಘಾತಕ ಬೌಲಿಂಗ್ ಮೂಲಕ ಒಟ್ಟು 7 ವಿಕೆಟ್ಗಳನ್ನು ಉರುಳಿಸಿ ಮಿಂಚಿದ್ದಾರೆ. ಮತ್ತೊಂದೆಡೆ, ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ದೆಹಲಿ ತಂಡದ ನಾಯಕತ್ವವನ್ನು ವಹಿಸಿ ಗಮನ ಸೆಳೆದಿದ್ದಾರೆ.
ಪಂಜಾಬ್ನ ರೋಪರ್ನಲ್ಲಿರುವ ಸರ್ಕಾರಿ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ನಡೆದ ಎಲೈಟ್ ಗ್ರೂಪ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡವು ವೇದಾಂತ್ ಅವರ ಮಾರಕ ದಾಳಿಗೆ ಸಿಲುಕಿ 65.3 ಓವರ್ಗಳಲ್ಲಿ 238 ರನ್ಗಳಿಗೆ ಸರ್ವಪತನ ಕಂಡಿತು.
ಬಲಗೈ ಆಫ್-ಸ್ಪಿನ್ನರ್ ಆಗಿರುವ 16 ವರ್ಷದ ವೇದಾಂತ್ 22.3 ಓವರ್ಗಳಲ್ಲಿ 5 ಮೇಡನ್ ಸಹಿತ 88 ರನ್ ನೀಡಿ 7 ವಿಕೆಟ್ ಕಬಳಿಸಿದರು. ಪಂಜಾಬ್ ನಾಯಕ ಹಾಗೂ ಭಾರತದ ಅಂಡರ್-19 ಏಷ್ಯಾಕಪ್ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರ್ಜುನ್ ರಜ್ಪೂತ್ ಸೇರಿದಂತೆ ಪ್ರಮುಖ ಬ್ಯಾಟ್ಸ್ಮನ್ಗಳನ್ನು ವೇದಾಂತ್ ಪೆವಿಲಿಯನ್ಗಟ್ಟಿದರು.
ಇನ್ನು ದೆಹಲಿ ತಂಡದ ನಾಯಕ ಹಾಗೂ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ 19 ವರ್ಷದ ಆರ್ಯವೀರ್ ಸೆಹ್ವಾಗ್, ಕಠಿಣ ಪರಿಸ್ಥಿತಿಯಲ್ಲಿ ತಾಳ್ಮೆಯ ಆಟವಾಡಿ 94 ಎಸೆತಗಳಲ್ಲಿ 31 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ವೇದಾಂತ್ ಮಾರಕ ಬೌಲಿಂಗ್: 22.3 ಓವರ್ಗಳಲ್ಲಿ 7 ವಿಕೆಟ್ ಪಡೆದ ವೇದಾಂತ್, ಪಂಜಾಬ್ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ಇದು ಅವರ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
ಆರ್ಯವೀರ್ ನಾಯಕತ್ವ ಮತ್ತು ಜವಾಬ್ದಾರಿಯಾಟ: ದೆಹಲಿ ತಂಡವನ್ನು ಮುನ್ನಡೆಸುತ್ತಿರುವ ಆರ್ಯವೀರ್, ಆರಂಭಿಕರಾಗಿ ಕಣಕ್ಕಿಳಿದು ಹೊಸ ಎಸೆತಗಳನ್ನು ಎದುರಿಸಿ ತಂಡದ ಇನ್ನಿಂಗ್ಸ್ ಅನ್ನು ಗಟ್ಟಿಗೊಳಿಸಿದರು.
ಅರ್ಹತೆ ಮತ್ತು ಸಾಧನೆ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಅಂಡರ್-19 ಏಷ್ಯಾಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದ ಆರ್ಯವೀರ್, ಇದೀಗ ದೇಶೀಯ ಪಂದ್ಯದಲ್ಲೂ ತಮ್ಮ ನಾಯಕತ್ವದ ಕೌಶಲ್ಯ ಪ್ರದರ್ಶಿಸುತ್ತಿದ್ದಾರೆ.




