
ನವದೆಹಲಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆಯಲ್ಲಿ ತೀವ್ರ ಭಿನ್ನಾಭಿಪ್ರಾಯ ಭುಗಿಲೆದ್ದಿರುವ ಬೆನ್ನಲ್ಲೇ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮದೇ ಪಕ್ಷದ ಸಂಸದ ಇಮ್ರಾನ್ ಮಸೂದ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮೈತ್ರಿಕೂಟದ ವಿಚಾರವಾಗಿ ಬಹಿರಂಗ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ಸಂಘಟನಾತ್ಮಕ ಕೆಲಸದತ್ತ ಗಮನಹರಿಸುವಂತೆ ಅವರು ಸೂಚಿಸಿದ್ದಾರೆ.
ಮುಂಬರುವ ಉತ್ತರ ಪ್ರದೇಶ ಚುನಾವಣೆಗಾಗಿ ‘ಇಂಡಿಯಾ’ ಮೈತ್ರಿಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎಸ್ಪಿ ನಡುವೆ ಇನ್ನೂ ಒಮ್ಮತ ಮೂಡಿಲ್ಲ. ಕಾಂಗ್ರೆಸ್ ಸುಮಾರು 130 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದರೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಆರಂಭಿಕವಾಗಿ ಕೇವಲ 26 ಸ್ಥಾನಗಳನ್ನು ನೀಡಲು ಮುಂದಾಗಿದೆ. ಈ ನಡುವೆ ಮಾತುಕತೆ ಪ್ರಗತಿಯಲ್ಲಿರುವಾಗಲೇ ಎಸ್ಪಿ ತನ್ನ ಮೊದಲ ಪಟ್ಟಿಯಲ್ಲಿ 5 ಅಭ್ಯರ್ಥಿಗಳನ್ನು ಘೋಷಿಸಿರುವುದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಶೇಷವಾಗಿ ಇಮ್ರಾನ್ ಮಸೂದ್ ಅವರ ಲೋಕಸಭಾ ಕ್ಷೇತ್ರವಾದ ಸಹರಾನ್ಪುರ ವ್ಯಾಪ್ತಿಯ ಬೆಹತ್ ಮತ್ತು ಸಹರಾನ್ಪುರ ವಿಧಾನಸಭಾ ಕ್ಷೇತ್ರಗಳಿಗೆ ಎಸ್ಪಿ ಅಭ್ಯರ್ಥಿಗಳನ್ನು ಪ್ರಕಟಿಸಿರುವುದು ಮಸೂದ್ ಅವರನ್ನು ಕೆರಳಿಸಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಸೂದ್ ಅವರು ಎಸ್ಪಿ ನಡೆಯನ್ನು ತೀವ್ರವಾಗಿ ಟೀಕಿಸಿದ್ದರು.
ಖರ್ಗೆಯವರ ಕಿವಿಮಾತು: ಇಮ್ರಾನ್ ಮಸೂದ್ ಅವರ ಸಂಸದೀಯ ಕಾರ್ಯವೈಖರಿಯನ್ನು ಶ್ಲಾಘಿಸಿದ ಖರ್ಗೆ, “ಟಿವಿ ಮಾಧ್ಯಮಗಳಲ್ಲಿ ಮಸೂದ್ ಅತ್ಯಂತ ಉತ್ಸಾಹದಿಂದ ಮಾತನಾಡುವುದನ್ನು ನಾನು ಕೇಳುತ್ತೇನೆ. ಆದರೆ, ನಾವು ಕೇವಲ ಮಾತುಗಳಿಗಿಂತ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದಷ್ಟೂ ನಾವು ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯ,” ಎಂದು ಕಿವಿಮಾತು ಹೇಳಿದರು.
ಆಂತರಿಕ ಭಿನ್ನಾಭಿಪ್ರಾಯದ ಎಚ್ಚರಿಕೆ: ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ ಖರ್ಗೆ, “ಚುನಾವಣೆಯಲ್ಲಿ ಗೆಲುವನ್ನು ಕಷ್ಟಕರವಾಗಿಸುವ ಯಾವುದಾದರೂ ಅಂಶವಿದ್ದರೆ ಅದು ಆಂತರಿಕ ಕಲಹ. ಹೊರಗಿನ ವಿರೋಧಿಗಳು ಯಾರು ಎಂದು ನಮಗೆ ತಿಳಿದಿದೆ, ಆದರೆ ನಮ್ಮೊಳಗಿನ ಶತ್ರು ಯಾರು ಎಂಬುದು ತಿಳಿಯುವುದಿಲ್ಲ. ಹೀಗಾಗಿ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು,” ಎಂದು ಮಾರ್ಮಿಕವಾಗಿ ನುಡಿದರು.
ಇಮ್ರಾನ್ ಮಸೂದ್ ಆಕ್ರೋಶ: ಎಸ್ಪಿ ಏಕಪಕ್ಷೀಯವಾಗಿ ಅಭ್ಯರ್ಥಿಗಳನ್ನು ಘೋಷಿಸಿದ್ದಕ್ಕೆ ಕಿಡಿಕಾರಿದ್ದ ಮಸೂದ್, “ನಾವು ಸೀಟುಗಳಿಗಾಗಿ ಭಿಕ್ಷೆ ಬೇಡುತ್ತಿಲ್ಲ. ಮೈತ್ರಿ ಎಂದರೆ ಸಮಾನ ಪಾಲುದಾರಿಕೆ ಇರಬೇಕು. ಮಿತ್ರಪಕ್ಷಗಳೊಂದಿಗೆ ಜಗಳವಾಡುವುದರಿಂದ ಯಾರಿಗೆ ಲಾಭ? ಇದು ಬಿಜೆಪಿಗೆ ಮಾತ್ರ ನೆರವಾಗುತ್ತದೆ. ಮೈತ್ರಿ ಧರ್ಮಕ್ಕಾಗಿ ನಾವು ಸುಮ್ಮನಿದ್ದೇವೆ,” ಎಂದು ವಾಗ್ದಾಳಿ ನಡೆಸಿದ್ದರು.
ಇನ್ನೊಂದೆಡೆ, ಮೈತ್ರಿಕೂಟದೊಳಗಿನ ಈ ಮುಸುಕಿನ ಗುದ್ದಾಟವನ್ನು ಶಮನಗೊಳಿಸಲು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮುಂದಾಗಿದ್ದಾರೆ. ಈಗಾಗಲೇ ಚರ್ಚಿಸಲಾದ 26 ಸ್ಥಾನಗಳನ್ನು ಮೀರಿ, ಕಾಂಗ್ರೆಸ್ ಸ್ಪರ್ಧಿಸಲು ಬಯಸುವ ಇತರ ಕ್ಷೇತ್ರಗಳನ್ನು ಗುರುತಿಸುವಂತೆ ಅವರು ಸಲಹೆ ನೀಡಿದ್ದಾರೆ. ಕೇವಲ ಸೀಟುಗಳ ಸಂಖ್ಯೆಯ ಹಂಚಿಕೆಗಿಂತ ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯ ಮತ್ತು ಪರಸ್ಪರ ಒಮ್ಮತಕ್ಕೆ ಆದ್ಯತೆ ನೀಡಬೇಕು ಎಂದು ಅಖಿಲೇಶ್ ಯಾದವ್ ಪ್ರತಿಪಾದಿಸಿದ್ದಾರೆ.
- Akhilesh Yadav
- Congress News
- Imran Masood
- INDIA Bloc
- Mallikarjun Kharge
- National Politics
- Saharanpur Constituency
- Samajwadi Party
- UP Seat Sharing Row
- Uttar Pradesh Assembly Elections 2027
- ಅಖಿಲೇಶ್ ಯಾದವ್
- ಇಂಡಿಯಾ ಮೈತ್ರಿಕೂಟ
- ಇಮ್ರಾನ್ ಮಸೂದ್.
- ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2027
- ಕಾಂಗ್ರೆಸ್ ಸುದ್ದಿ
- ಮಲ್ಲಿಕಾರ್ಜುನ ಖರ್ಗೆ
- ರಾಷ್ಟ್ರೀಯ ರಾಜಕೀಯ
- ಸಮಾಜವಾದಿ ಪಕ್ಷ
- ಸೀಟು ಹಂಚಿಕೆ ವಿವಾದ




